ಯುಎಇ, ಸೌದಿ ಅರೇಬಿಯಾ ಸೇರಿದಂತೆ 10 ದೇಶಗಳ ಅನಿವಾಸಿ ಭಾರತೀಯರಿಗೆ ಶೀಘ್ರವೇ UPI ಪಾವತಿ ಸೇವೆ ಲಭ್ಯ

ಹೊಸದಿಲ್ಲಿ: ಹತ್ತು ದೇಶಗಳ ಅನಿವಾಸಿ ಭಾರತೀಯರು ತಮ್ಮ ಅನಿವಾಸಿ (ವಿದೇಶ) ರೂಪಾಯಿ (NRE) ಅಥವಾ ಸಾಮಾನ್ಯ ಅನಿವಾಸಿ (NRO) ಬ್ಯಾಂಕ್ ಖಾತೆಗಳಿಂದ UPI ಪಾವತಿ ಸೇವೆ ಬಳಸಿಕೊಂಡು ಶೀಘ್ರವೇ ಹಣ ವರ್ಗಾಯಿಸುವ ಸೌಲಭ್ಯ ಪಡೆಯಲಿದ್ದಾರೆ.
ಇದಕ್ಕೂ ಮುನ್ನ, ಎಪ್ರಿಲ್ 30 ರೊಳಗೆ ಅನಿವಾಸಿ ಭಾರತೀಯರು ಭಾರತೀಯ ಮೊಬೈಲ್ ನಂಬರ್ ಪಡೆಯದೆಯೂ ಡಿಜಿಟಲ್ ಪಾವತಿ ಮಾಡುವಂತಾಗಲು ತಾಂತ್ರಿಕತೆಯೊಂದನ್ನು ಅಭಿವೃದ್ಧಿಪಡಿಸುವಂತೆ UPI ಪಾಲುದಾರರಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ತನ್ನ ಸುತ್ತೋಲೆಯಲ್ಲಿ ಸೂಚಿಸಿತ್ತು ಎಂದು hindustantimes.com ವರದಿ ಮಾಡಿದೆ.
ಪ್ರಾಯೋಗಿಕ ಪರೀಕ್ಷೆಯಾಗಿ ಹತ್ತು ದೇಶಗಳ ಅನಿವಾಸಿ ಭಾರತೀಯರಿಗೆ ಆನ್‌ಲೈನ್ ವಹಿವಾಟು ನಡೆಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅವಕಾಶ ಕಲ್ಪಿಸಿದೆ. ಈ ದೇಶಗಳ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿರುವ ಭಾರತೀಯರು ಡಿಜಿಟಲ್ ವಹಿವಾಟು ನಡೆಸಲು ಸಾಧ್ಯವಾಗಲಿದೆ. "ಆರಂಭದಲ್ಲಿ ಹತ್ತು ದೇಶಗಳ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಗಳಿಗೆ ಡಿಜಿಟಲ್ ವಹಿವಾಟು ನಡೆಸಲು ಅವಕಾಶ ಒದಗಿಸಲಾಗುತ್ತಿದೆ. ಶೀಘ್ರದಲ್ಲೇ ಈ ಸೌಲಭ್ಯವನ್ನು ಇನ್ನಿತರ ದೇಶಗಳ ಕೋಡ್‌ಗಳಿಗೂ ವಿಸ್ತರಿಸಲಾಗುವುದು" ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಸೌಲಭ್ಯ ಪಡೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕಾ, ಬ್ರಿಟನ್, ಸಿಂಗಾಪುರ್, ಕೆನಡಾ, ಆಸ್ಟ್ರೇಲಿಯಾ, ಒಮನ್, ಖತರ್, ಯುಎಇ, ಸೌದಿ ಅರೇಬಿಯಾ ಮತ್ತು ಹಾಂಗ್ ಕಾಂಗ್ ಸೇರಿವೆ. ಈ ದೇಶಗಳಲ್ಲಿನ ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದವರು ಅನಿವಾಸಿ (ವಿದೇಶ) ರೂಪಾಯಿ ಬ್ಯಾಂಕ್ ಖಾತೆಗಳನ್ನು ತೆರೆದು ಮತ್ತು ಈ ದೇಶಗಳಲ್ಲಿನ ಭಾರತೀಯರು ಸಾಮಾನ್ಯ ಅನಿವಾಸಿ ಬ್ಯಾಂಕ್ ಖಾತೆಗಳನ್ನು ತೆರೆದು ಡಿಜಿಟಲ್ ಪಾವತಿ ಮಾಡಬಹುದಾಗಿದೆ.
ಆದರೆ, UPI ಪಾಲುದಾರರಿಗೆ ಕಾಲ ಕಾಲಕ್ಕೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿರ್ಬಂಧಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.
ಇದನ್ನೂ ಓದಿ: ತೀವ್ರ ಆಕ್ರೋಶದ ಬಳಿಕ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ







