ಸಾರಾ ಅಬೂಬಕರ್ ಗೆ ಅಂತಿಮ ಗೌರವ ಸಲ್ಲಿಸದೆ ಅಸಹಿಷ್ಣುತೆ ತೋರಲಾಗಿದೆ: ಜಿಲ್ಲಾಡಳಿತ, ಜನಪ್ರತಿನಿಧಿಗಳ ನಡೆಗೆ ಖಂಡನೆ

ಮಂಗಳೂರು, ಜ.12: ಕನ್ನಡದ ಪ್ರಖ್ಯಾತ ಬರಹಗಾರ್ತಿ ಸಾರಾ ಅಬೂಬಕರ್ ನಿಧನ ಹೊಂದಿದ ಸಂದರ್ಭ ಸರಿಯಾದ ಗೌರವ ಸಲ್ಲಿಸದೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕಡೆಗಣಿಸಿರುವುದು ಖೇದಕರ. ಸರಕಾರದ ಈ ನಡೆಯನ್ನು ಹಲವು ಗಣ್ಯರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆಗೊಳಿಸಿರುವ ಬಿ.ಎಂ.ರೋಹಿಣಿ, ಪ್ರೊ.ನರೇಂದ್ರ ನಾಯಕ್, ಟಿ.ಆರ್.ಭಟ್, ಚಂದ್ರಕಲಾ ನಂದಾವರ, ಪ್ರೊ. ಚಂದ್ರ ಪೂಜಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಎಂ.ದೇವದಾಸ್, ಬಿ.ಎಂ.ಹನೀಫ್, ವಾಸುದೇವ ಉಚ್ಚಿಲ, ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ಪ್ರೊ.ಕೆ.ರಾಜೇಂದ್ರ ಉಡುಪ, ಮೋಹನ್ ಪಿ. ವಿ., ಐ.ಕೆ.ಬೊಳುವಾರು, ಯಶವಂತ ಮರೋಳಿ, ಮುನೀರ್ ಕಾಟಿಪಳ್ಳ, ಡಾ.ಕೃಷ್ಣಪ್ಪ ಕೊಂಚಾಡಿ, ಶ್ರೀನಿವಾಸ ಕಾರ್ಕಳ ಅವರು ಸಾರಾ ಅಬೂಬಕರ್ ಪ್ರಖ್ಯಾತ ಕತೆಗಾರರು, ಬರಹಗಾರರು ಎಂಬಲ್ಲಿಗೆ ಅವರ ಪ್ರಾಮುಖ್ಯತೆ ಮುಗಿಯುವುದಿಲ್ಲ. ಕರ್ನಾಟಕದ ಮುಸ್ಲಿಮ್ ಸಮುದಾಯ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಆ ಸಮುದಾಯದ ಹೆಣ್ಣು ಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದದ್ದು, ಸಮಾಜದ ಕಂದಾಚಾರ, ತನ್ನದೇ ಸಮುದಾಯದ ಹೆಣ್ಣು ಮಕ್ಕಳ ಸಂಕಟಗಳನ್ನು ಕತೆಯಾಗಿಸಿದ್ದು ಸಣ್ಣ ಸಾಧನೆಯೇನೂ ಅಲ್ಲ. ಅಂತಹ ಬರವಣಿಗೆಗಳ ಕಾರಣಕ್ಕೆ ಅವರು ಎದುರಿಸಿದ ದಾಳಿ, ದಬ್ಬಾಳಿಕೆಗಳೂ ಸಣ್ಣದಲ್ಲ. ಬರವಣಿಗೆಯ ಜೊತೆಗೆ ಮಹಿಳಾಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡ ಹೆಗ್ಗಳಿಕೆ ಸಾರಾ ಅವರದ್ದು. ಅವರ ಕತೆ, ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು ಮಾತ್ರವಲ್ಲ, ಕನ್ನಡದ ಹಿರಿಮೆಯನ್ನು ಹೊರನಾಡಿನಲ್ಲಿಯೂ ಎತ್ತಿ ಹಿಡಿದಿದೆ. ತನ್ನ ಸಾಧನೆಗಾಗಿ ಅವರು ಅರ್ಹವಾಗಿಯೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇಂತಹ ಗಣ್ಯ ಬರಹಗಾರ್ತಿ, ಲೇಖಕಿ ಅಗಲಿದ ಸಂದರ್ಭ ಸಹಜವಾಗಿಯೇ ಅವರಿಗೆ ಸರಕಾರಿ ಗೌರವಗಳು ಸಲ್ಲಬೇಕಿತ್ತು. ಆದರೆ ಸರಕಾರದ ಯಾವುದೇ ಅಂತಿಮ ಗೌರವಗಳು ಅವರಿಗೆ ಸಲ್ಲಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಾರಾ ಅಬೂಬಕರ್ ಅವರಿಗೆ ಸರಕಾರದ, ಜಿಲ್ಲಾಡಳಿತದ ಪ್ರತಿನಿಧಿಗಳು ಅಧಿಕೃತ ಗೌರವ ಸಲ್ಲಿಸಲಿಲ್ಲ. ಉಸ್ತುವಾರಿ ಸಚಿವರು, ಶಾಸಕರುಗಳು ನಗರದಲ್ಲೇ ಇದ್ದರೂ ಅಂತಿಮ ದರ್ಶನ ಪಡೆಯಲಿಲ್ಲ. ಇದು ಅಪಾರ ನೋವಿನ ವಿಚಾರವಾಗಿದೆ.. ಈ ಕಡೆಗಣನೆ ಆಕಸ್ಮಿಕ ಆಗಿರಲಾರದು. ಇದು ಸರಕಾರ ಪ್ರಗತಿಪರ, ಜಾತ್ಯತೀತ ವಿಚಾರಗಳು, ಸಾಹಿತಿ, ಬುದ್ದಿಜೀವಿಗಳ ಕುರಿತು ಇತ್ತೀಚೆಗೆ ಹೊಂದಿರುವ ಅಸಹಿಷ್ಣು ಧೋರಣೆಗಳು, ಕೋಮುವಾದಿ ದೃಷ್ಟಿಕೋನದ ಭಾಗವಾದ ನಿಲುವೇ ಆಗಿದೆ ಎಂಬಂತೆ ತೋರುತ್ತದೆ. ರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ ಈ ಧೋರಣೆ ಆಘಾತಕಾರಿಯಾಗಿದ್ದು, ಕನ್ನಡನಾಡಿನ ವಿಶಾಲ, ಉದಾರ ಪ್ರಜ್ಞೆಗೆ ವಿರುದ್ದವಾಗಿದೆ, ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.