ಆಮಿಷ ಪ್ರಕರಣ: ಕೇರಳ ಬಿಜೆಪಿ ಮುಖ್ಯಸ್ಥ ಸುರೇಂದ್ರನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ತಿರುವನಂತಪುರಂ: ಚುನಾವಣೆಯ ಸಂದರ್ಭ ಆಮಿಷ ನೀಡಿದ ಪ್ರಕರಣದಲ್ಲಿ ಕೇರಳ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ವಿರುದ್ಧ ಕೇರಳ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ದಳ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನ ಪ್ರತಿಸ್ಪರ್ಧಿ ಅಭ್ಯರ್ಥಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಆಮಿಷ ಒಡ್ಡಿದ್ದರು ಎಂಬ ಆರೋಪಕ್ಕೆ ಕೆ. ಸುರೇಂದ್ರನ್ (Kerala BJP chief Surendran) ಗುರಿಯಾಗಿದ್ದಾರೆ. ಈ ಸಂಬಂಧ ಅವರ ವಿರುದ್ಧ ಜಾಮೀನುರಹಿತವಾದ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿದ್ದು, ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅಪರಾಧ ವಿಭಾಗವು ಆರೋಪ ಪಟ್ಟಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಸುರೇಂದ್ರನ್ ವಿರುದ್ಧ ಅಪರಾಧ ವಿಭಾಗ ಸಲ್ಲಿಸಿರುವ ಆರೋಪ ಪಟ್ಟಿಯ ಹಿಂದೆ ಆಡಳಿತಾರೂಢ ಸಿಪಿಎಂ (CPM) ಸರ್ಕಾರದ ರಾಜಕೀಯ ಪಿತೂರಿ ಇದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳೀಧರನ್, ಸುರೇಂದ್ರನ್ ವಿರುದ್ಧದ ಪ್ರಕರಣ ನಕಲಿಯಾಗಿದೆ. ಸಿಪಿಎಂ ಸಚಿವರೊಬ್ಬರು ಮಾದಕದ್ರವ್ಯ ಪ್ರಕರಣದಲ್ಲಿ ಸೆರೆಯಾದ ಮರುದಿನವೇ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅವರನ್ನು ಬಗ್ಗುಬಡಿಯಲು ಅಪರಾಧ ವಿಭಾಗವನ್ನು ಬಳಸಿಕೊಳ್ಳುತ್ತಿರುವ ನಡೆಯನ್ನು ಕಾನೂನಾತ್ಮಕ ಮತ್ತು ರಾಜಕೀಯವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.
2021ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಂಜೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನನ್ನ ನಾಮಪತ್ರವನ್ನು ಹಿಂಪಡೆಯುವಂತೆ ಮೊದಲಿಗೆ ಬೆದರಿಸಿದ್ದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್, ನಂತರ ನನಗೆ ರೂ. 2.5 ಲಕ್ಷ ಲಂಚ ನೀಡಿದ್ದರು ಎಂದು ಬಿಎಸ್‌ಪಿ ಅಭ್ಯರ್ಥಿ ಸುಂದರ ಆರೋಪಿಸಿದ್ದರು.
ಈ ಸಂಬಂಧ ಮಂಜೇಶ್ವರಂ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯಾಗಿದ್ದ ವಿ.ವಿ.ರಮೇಶನ್ ಜೂನ್, 2021ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿತ್ತು.
ನ್ಯಾಯಾಲಯದ ಸೂಚನೆಯನ್ವಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 (B) ಮತ್ತು (E) (ಆಮಿಷ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ: ಗುಜರಾತ್ ಬಿಜೆಪಿ ಸರ್ಕಾರದ ಪೋಸ್ಟರ್‌ನಲ್ಲಿ ತಿರುವನಂತಪುರಂನ ಸಿಪಿಐ(ಎಂ) ಮೇಯರ್ ಚಿತ್ರ!







