ಮುಂಬೈ-ನವಿ ಮುಂಬೈ ಸಂಪರ್ಕಿಸುವ ಭಾರತದ ಅತಿ ಉದ್ದದ ಸಮುದ್ರ ಸೇತುವೆ ವರ್ಷಾಂತ್ಯಕ್ಕೆ ಲೋಕಾರ್ಪಣೆ: ಶಿಂಧೆ

ಮುಂಬೈ, ಜ. 12: ದೇಶದ ಆರ್ಥಿಕ ರಾಜಧಾನಿ ಮುಂಬೈ ಮತ್ತು ಅದರ ಉಪನಗರ ನವಿ ಮುಂಬೈ ನಡುವಿನ ಪ್ರಯಾಣ ಅವಧಿಯನ್ನು ಸಮುದ್ರ ಸೇತುವೆಯು ಇನ್ನು ಕೇವಲ 15 ನಿಮಿಷಕ್ಕೆ ಇಳಿಸಲಿದೆ. ಈಗ ಈ ಪ್ರಯಾಣಕ್ಕೆ ಮೂರು ಗಂಟೆ ತಗಲುತ್ತದೆ.
22 ಕಿ.ಮೀ. ಉದ್ದದ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (ಎಮ್ಟಿಎಚ್ಎಲ್) ಸಮುದ್ರ ಸೇತುವೆಯು ಈ ವರ್ಷದ ನವೆಂಬರ್ನಲ್ಲಿ ಸಾರ್ವಜನಿಕರ ಬಳಕೆಗೆ ತೆರೆಯುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಇದು ದೇಶದ ಅತ್ಯಂತ ಉದ್ದದ ಸಮುದ್ರ ಸೇತುವೆ ಆಗಲಿದೆ. ಇದು ದಕ್ಷಿಣ ಮುಂಬೈಯನ್ನು ನವಿ ಮುಂಬೈ ಮತ್ತು ರಾಯಗಡದೊಂದಿಗೆ ಸಂಪರ್ಕಿಸುತ್ತದೆ.
ಈ ಸೇತುವೆಯು ಓಪನ್ ರೋಡ್ ಟಾಲಿಂಗ್ (ಒಆರ್ಟಿ) ವ್ಯವಸ್ಥೆಯನ್ನು ಹೊಂದಿದ ದೇಶದ ಮೊದಲ ಸೇತುವೆಯಾಗಲಿದೆ. ಈ ತಂತ್ರಜ್ಞಾನವು ಸಿಂಗಾಪುರದಂಥ ದೇಶಗಳಲ್ಲಿ ಬಳಕೆಯಲ್ಲಿದೆ. ಈ ವ್ಯವಸ್ಥೆಯಲ್ಲಿ ಟಾಲ್ ಪಾವತಿಸಲಿಕ್ಕಾಗಿ ವಾಹನಗಳು ಎಲ್ಲಿಯೂ ನಿಲ್ಲಬೇಕಾಗಿಲ್ಲ. ಈ ಸೇತುವೆಯ ಒಟ್ಟು 22 ಕಿ.ಮೀ. ಉದ್ದದ ಪೈಕಿ 16.5 ಕಿ.ಮೀ. ಸಮುದ್ರದ ಮೂಲಕ ಹಾದು ಹೋಗುತ್ತದೆ.
ಟ್ರಾನ್ಸ್-ಹಾರ್ಬರ್ ಲಿಂಕ್ ಸೇತುವೆಯನ್ನು ಈಗ ನಿರ್ಮಾಣ ಹಂತದಲ್ಲಿರುವ ಅಷ್ಟಪಥ ಕರಾವಳಿ ಹೆದ್ದಾರಿಯೊಂದಿಗೆ ಸಂಪರ್ಕಿಸಲಾಗುವುದು. ಈ ಹೆದ್ದಾರಿಯು ಮರೀನ್ ಡ್ರೈವ್ನಿಂದ ಆರಂಭಗೊಂಡು ಬಾಂದ್ರಾ-ವರ್ಲಿ ಸೀ ಲಿಂಕ್ನ ವರ್ಲಿ ತುದಿಯಲ್ಲಿ ಕೊನೆಗೊಳ್ಳುತ್ತದೆ.
‘‘ಎಮ್ಟಿಎಚ್ಎಲ್ ತುಂಬಾ ಇಂಧನವನ್ನು ಉಳಿಸುತ್ತದೆ. ಮೂರು ಗಂಟೆಯ ಪ್ರಯಾಣ ಅವಧಿಯನ್ನು ಕೆಲವೇ ನಿಮಿಷಗಳಿಗೆ ಇಳಿಸುವ ಮೂಲಕ ಅದು ವಾಯು ಮಾಲಿನ್ಯವನ್ನು ತಗ್ಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ’’ ಎಂದು ಏಕನಾಥ್ ಶಿಂಧೆ ಹೇಳಿದರು.
ಮುಖ್ಯಾಂಶಗಳು
► 22 ಕಿ.ಮೀ. ಉದ್ದದ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (ಎಮ್ಟಿಎಚ್ಎಲ್) ಸಮುದ್ರ ಸೇತುವೆ
► 3 ಗಂಟೆಯ ಪ್ರಯಾಣ ಅವಧಿ 15 ನಿಮಿಷಕ್ಕೆ ಇಳಿಕೆ
► ದಕ್ಷಿಣ ಮುಂಬೈಯನ್ನು ನವಿ ಮುಂಬೈ ಮತ್ತು ರಾಯಗಡದೊಂದಿಗೆ ಸಂಪರ್ಕಿಸುತ್ತದೆ
► ಸೇತುವೆಯ ಒಟ್ಟು 22 ಕಿ.ಮೀ. ಉದ್ದದ ಪೈಕಿ 16.5 ಕಿ.ಮೀ. ಸಮುದ್ರದಲ್ಲಿ
► ಈ ವರ್ಷದ ನವೆಂಬರ್ನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತ







