ದ್ವಿತೀಯ ಏಕದಿನ: ರಾಹುಲ್ ಅರ್ಧಶತಕ, ಭಾರತಕ್ಕೆ ಗೆಲುವು, ಸರಣಿ ಕೈವಶ
ಕೋಲ್ಕತಾ, ಜ.12: ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡಿದ ಕೆ.ಎಲ್.ರಾಹುಲ್(ಔಟಾಗದೆ 64 ರನ್, 103 ಎಸೆತ, 6 ಬೌಂಡರಿ) ನೆರವಿನಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಪ್ರತಿಷ್ಠಿತ ಈಡನ್‌ಗಾರ್ಡನ್ಸ್ ಸ್ಟೇಡಿಯಮ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 216 ರನ್ ಗುರಿ ಪಡೆದಿದ್ದ ಭಾರತ 43.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ 215 ರನ್‌ಗೆ ಆಲೌಟಾಗಿತ್ತು.
ಭಾರತದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ(17 ರನ್), ಶುಭಮನ್ ಗಿಲ್(21 ರನ್), ವಿರಾಟ್ ಕೊಹ್ಲಿ(4 ರನ್)ಹಾಗೂ ಶ್ರೇಯಸ್ ಅಯ್ಯರ್(28 ರನ್) ಬೇಗನೆ ಔಟಾದರು. ಆಗ 5ನೇ ವಿಕೆಟಿಗೆ 75 ರನ್ ಜೊತೆಯಾಟ ನಡೆಸಿದ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಪಾಂಡ್ಯ(36 ರನ್, 53 ಎಸೆತ)ಔಟಾದ ನಂತರ ಅಕ್ಷರ್ ಪಟೇಲ್(21 ರನ್, 21 ಎಸೆತ)ರೊಂದಿಗೆ 6ನೇ ವಿಕೆಟಿಗೆ 30 ರನ್ ಹಾಗೂ ಕುಲದೀಪ್ ಯಾದವ್ ಜೊತೆ 7ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 28 ರನ್ ಸೇರಿಸಿದ ರಾಹುಲ್ ಇನ್ನೂ 40 ಎಸೆತಗಳು ಬಾಕಿ ಇರುವಾಗಲೇ ಭಾರತಕ್ಕೆ ಗೆಲುವು ತಂದುಕೊಟ್ಟರು.