ಕೆಮ್ಮು ಸಿರಪ್ ಸೇವಿಸಿ ಉಝ್ಬೆಕಿಸ್ತಾನ ಮಕ್ಕಳ ಸಾವು ಪ್ರಕರಣ: ಮರಿಯೋನ್ ಬಯೋಟೆಕ್ ನ ಉತ್ಪಾದನಾ ಪರವಾನಿಗೆ ಸ್ಥಗಿತ

ಹೊಸದಿಲ್ಲಿ, ಜ. 12: ನೋಯಿಡದಲ್ಲಿರುವ ಔಷಧ ತಯಾರಿಕಾ ಕಂಪೆನಿ ಮರಿಯೋನ್ ಬಯೋಟೆಕ್ ಗೆ ನೀಡಲಾಗಿರುವ ಉತ್ಪಾದನಾ ಪರವಾನಿಗೆಯನ್ನು ಅಮಾನತಿನಲ್ಲಿಡಲಾಗಿದೆ ಹಾಗೂ ಅದರ ವಿವಾದಾಸ್ಪದ ಕೆಮ್ಮು ಸಿರಪ್‌ನ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಉತ್ತರಪ್ರದೇಶದ ಔಷಧ ಇಲಾಖೆಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ. ಈ ಕಂಪೆನಿಯ ಕೆಮ್ಮು ಸಿರಪ್ ಸೇವಿಸಿ ಉಝ್ಬೆಕಿಸ್ತಾನದಲ್ಲಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿದೆ.
‘ಆಂಬ್ರೊನೊಲ್’ ಮತ್ತು ‘ಡೋಕ್-1 ಮ್ಯಾಕ್ಸ್’ ಸಿರಪ್ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು ವೈದ್ಯಕೀಯ ಎಚ್ಚರಿಕೆ ಹೊರಡಿಸಿದ ಒಂದು ದಿನದ ಬಳಿಕ, ಕೇಂದ್ರೀಯ ಸಂಸ್ಥೆಗಳು ಮತ್ತು ಉತ್ತರಪ್ರದೇಶದ ಔಷಧ ವಿಭಾಗದ ಅಧಿಕಾರಿಗಳ ತಂಡವೊಂದು ಗುರುವಾರ ನೋಯಿಡದಲ್ಲಿರುವ ಮರಿಯೋನ್ ಬಯೋಟೆಕ್ ಕಚೇರಿಯಲ್ಲಿ ಹೊಸದಾಗಿ ತಪಾಸಣೆ ನಡೆಸಿತು. ಈ ಎರಡೂ ಸಿರಪ್ಗಳನ್ನು ಮರಿಯೋನ್ ಬಯೋಟೆಕ್ ತಯಾರಿಸಿದೆ.
ಉಝ್ಬೆಕಿಸ್ತಾನದಲ್ಲಿ ಸಂಭವಿಸಿದ 18 ಮಕ್ಕಳ ಸಾವಿಗೆ ಮರಿಯೋನ್ ಬಯೋಟೆಕ್ ಕಂಪೆನಿಯ ಕೆಮ್ಮು ಸಿರಪ್ ಕಾರಣ ಎಂಬ ಆರೋಪ ಕೇಳಿಬಂದ ಬಳಿಕ, ಭಾರತದ ಔಷಧ ಮತ್ತು ವೈದ್ಯಕೀಯ ಸಾಧನಗಳ ನಿಯಂತ್ರಣ ಸಂಸ್ಥೆಯಾಗಿರುವ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ)ಯು ಡಿಸೆಂಬರ್ನಲ್ಲಿ ತನಿಖೆ ಆರಂಭಿಸಿತ್ತು.
ಸಾವಿಗೀಡಾಗಿರುವ ಮಕ್ಕಳು ಈ ಕೆಮ್ಮು ಸಿರಪ್ಗಳನ್ನು ಸೇವಿಸಿದ್ದರು ಎಂದು ಉಝ್ಬೆಕಿಸ್ತಾನದ ಆರೋಗ್ಯ ಸಚಿವಾಲಯ ಹೇಳಿತ್ತು. ಕೇಂದ್ರೀಯ ಮತ್ತು ರಾಜ್ಯ ತಂಡಗಳು, ಇದಕ್ಕೂ ಮೊದಲು, ಡಿಸೆಂಬರ್ 29ರಂದು ಕಂಪೆನಿಯ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಡೋಕ್-1 ಮ್ಯಾಕ್ಸ್ ಸಿರಪ್ನ ಆರು ಮಾದರಿಗಳನ್ನು ಪರೀಕ್ಷೆಗಾಗಿ ಒಯ್ದಿದ್ದವು. ಗುರುವಾರ, ಅವುಗಳು ಪುನಃ ಆಂಬ್ರನೋಲ್ ಸಿರಪ್ನ ನಾಲ್ಕು ಮಾದರಿಗಳನ್ನು ಒಯ್ದುವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







