ಆರ್ಯ ಸಂಸ್ಕೃತಿಯಲ್ಲಿ ಬ್ರಾಹ್ಮಣರೇ ಪುರೋಹಿತರು: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಜ.12: ದೇಶದ ಆರ್ಯೀಕರಣದಲ್ಲಿ ಬ್ರಾಹ್ಮಣರು, ಅದರಲ್ಲೂ ವೈದಿಕ ಬ್ರಾಹ್ಮಣರೇ ಪುರೋಹಿತರಾಗಬೇಕಿದೆ. ಇಂತಹ ವ್ಯವಸ್ಥೆ ಈಗಲೂ ಚಾಲ್ತಿಯಲ್ಲಿದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ನುಡಿದರು.
ಗುರುವಾರ ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರೀಯ ದ್ರಾವಿಡ ಸಂಘ(ಆರ್‍ಡಿಎಸ್) ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಿವಕ ಮಾತಗಳನ್ನಾಡಿದ ಅವರು, ಪುರೋಹಿತರು ದ್ರಾವಿಡರಲ್ಲೂ ಇದ್ದರು. ಆದರೆ, ಅವರವರ ಜಾತಿಗೆ ಪುರೋಹಿತರಾಗಿ ಸೀಮಿತರಾಗಿದ್ದಾರೆ.ಇನ್ನೂ, ಆರ್ಯೀಕರಣದಲ್ಲಿ ಬ್ರಾಹ್ಮಣರು, ಅದರಲ್ಲೂ ವೈದಿಕ ಬ್ರಾಹ್ಮಣರೇ ಪುರೋಹಿತರಾಗಬೇಕಿದೆ ಎಂದು ಹೇಳಿದರು.
ಇನ್ನೂ, ಈ ದೇಶಕ್ಕೆ ಆರ್ಯರು ಬಂದ ಮೇಲೆ ವರ್ಣ, ಜಾತಿ ವ್ಯವಸ್ಥೆ ನಿರ್ಮಾಣವಾಯಿತು. ಬ್ರಾಹ್ಮಣರು ಮೇಲಿರಬೇಕು, ಶೂದ್ರರು ಕೆಳಗಿರಬೇಕು, ದಲಿತರು ಹೊರಗಿರಬೇಕು ಎಂಬ ಜಾತಿ ವ್ಯವಸ್ಥೆಯನ್ನು ಪ್ರಾರಂಭಿಸಿದರು ಎಂದ ಅವರು, ಈ ನೆಲದಲ್ಲಿ ದ್ರಾವಿಡರಿಗೆ ಕನಿಷ್ಠ 50 ಸಾವಿರ ವರ್ಷಗಳ ಇತಿಹಾಸವಿದೆ. ಹಲವು ಬುಡಕಟ್ಟು ಸಮುದಾಯ, ಬಹು ಸಂಸ್ಕೃತಿ, ಭಾಷೆ ಗೊಂಚಲಿನ ಗುರುತನ್ನು ದೇಶಕ್ಕೆ ತಂದುಕೊಟ್ಟ ಹೆಮ್ಮೆ ದ್ರಾವಿಡ ಜನಾಂಗಕ್ಕೆ ಇದೆ ಎಂದು ವಿಶ್ಲೇಷಿಸಿದರು.
ಶ್ರಮಿಕರ ಸಂಸ್ಕೃತಿಗಳನ್ನು ನಿರ್ಲಕ್ಷ್ಯ ಮಾಡಿ, ಒಂದೇ ಸಂಸ್ಕೃತಿ, ಒಂದೇ ಭಾಷೆ, ಒಂದೇ ಸಮಾಜ ಎಂದು ಮಾತನಾಡುತ್ತಿದ್ದಾರೆ. ವಾಸ್ತವವಾಗಿ ಭಾರತದಲ್ಲಿ ಒಂದೇ ಸಮಾಜ, ಒಂದೇ ಭಾಷೆ, ಒಂದೇ ಸಂಸ್ಕೃತಿ ಎಂಬುದು ಇಲ್ಲ. ಅಲ್ಲದೆ, ನಾವು ಯಾವುದೇ ಸಂಸ್ಕೃತಿಗೆ ವಿರುದ್ಧವಲ್ಲ. ಆದರೆ, ನಮ್ಮ ಸಂಸ್ಕೃತಿ, ಭಾಷೆಗಳನ್ನು ಕೀಳು ಎಂದರೆ ನಾವು ಸುಮ್ಮನಿರುವುದಿಲ್ಲ ಎಂದರು.
ಆಫ್ರಿಕ ಮೂಲ: ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ. ಪಾಟೀಲ್ ಮಾತನಾಡಿ, ಭಾರತದ ಮೂಲ ನಿವಾಸಿಗಳು ಆಫ್ರಿಕನ್ನರು ಎಂದು ಡಿಎನ್‍ಎ ಮೂಲಕ ತಿಳಿದುಬಂದಿದೆ . 70 ಸಾವಿರ ವರ್ಷಗಳ ಹಿಂದೆ ಅವರು ಇಲ್ಲಿದ್ದರು. ಇದಕ್ಕೆಲ್ಲ ವೈಜ್ಞಾನಿಕ ಪುರಾವೆಗಳು ಸಿಕ್ಕಿವೆ. ಸಂಶೋಧನೆಗಳಿವೆ. 45 ಸಾವಿರ ವರ್ಷಗಳ ಹಿಂದೆ ಇರಾನ್ ಮೂಲದವರು ಬಂದಿದ್ದರು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ. ಪಾಟೀಲ್ ಹೇಳಿದರು.
‘ದ್ರಾವಿಡರು ಒಂದಾಗಬೇಕು': ದ್ರಾವಿಡರು ನಾವು ಐದು ರಾಜ್ಯಗಳಲ್ಲಿದ್ದೇವೆ. ಉತ್ತರದಲ್ಲೂ ದ್ರಾವಿಡರಿದ್ದಾರೆ. ಇವರೆಲ್ಲರನ್ನೂ ಸೇರಿಸಿ, ಅವರಲ್ಲಿ ಸಾಂಸ್ಕೃತಿಯ ಜಾಗೃತಿಯನ್ನು ಮೂಡಿಸಲಿದ್ದೇವೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.







