IUML ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ರಾಹೀಂ ಅಹ್ಮದ್ ಜೋಕಟ್ಟೆ ರಾಜೀನಾಮೆ

ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಹ್ಮದ್ ಜೋಕಟ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಐಯುಎಂಎಲ್‌ನ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಖಾದರ್ ಮೊಯೀನ್ ಸಾಹೇಬ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಎನ್. ಜಾವೇದುಲ್ಲಾ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಎನ್. ಜಾವೇದುಲ್ಲಾ ಅವರಿಗೆ ಸಾರ್ವಜನಿಕ ಸಂಪರ್ಕವೂ ಇಲ್ಲ, ರಾಜಕೀಯ ಪ್ರಬುದ್ಧತೆಯೂ ಇಲ್ಲ. ಅವರಿಗೆ ಯಾವುದೇ ನಾಯಕತ್ವದ ಗುಣವಾಗಲಿ, ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವಾಗಲಿ ಇಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಇರುವಂತಹ ಮೂಲಭೂತ ರಾಜಕೀಯ ಜ್ಞಾನ ಅವರಿಗಿಲ್ಲ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 37 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎಂದು ಅವರ ಘೋಷಣೆ ಅವರ ರಾಜಕೀಯ ಚಾಣಾಕ್ಷ ಕೊರತೆಗೆ ಒಂದು ಉದಾಹರಣೆಯಾಗಿದೆ. ಅವರಂತಹ ವ್ಯಕ್ತಿ ಪಕ್ಷವನ್ನು ಮುನ್ನಡೆಸಲು ಸಾಧ್ಯವಿಲ್ಲ ಹೀಗಾಗಿ ತನಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲು ನನ್ನ ಆತ್ಮಸಾಕ್ಷಿಯು ಒಪ್ಪುವುದಿಲ್ಲ ಆದ್ದರಿಂದ ತಾನು ಈ ಮೂಲಕ ಐಯುಎಂಎಲ್ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನನ್ನ ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.