ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ

ಶರದ್ ಯಾದವ್ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶರದ್ ಯಾದವ್ ಅವರು 1999 ಹಾಗೂ 2004ರ ನಡುವೆ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. 2003ರಲ್ಲಿ ಅವರು ಸಂಯುಕ್ತ ಜನತಾದಳ(ಜೆಡಿಯು)ದ ಅಧ್ಯಕ್ಷರಾಗಿದ್ದರು. ಆನಂತರ ಅವರು 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಆದರೆ, ಆಗ ಅವರಿಗೆ ರಾಜ್ಯಸಭೆಯ ಸ್ಥಾನ ಪಡೆಯಲು ಆಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನೆರವಾಗಿದ್ದರು.
2009ರಲ್ಲಿ ಶರದ್ ಯಾದವ್ ಅವರು ಮತ್ತೆ ಮಾಧೇಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಆದರೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯು ಸೋತ ಬಳಿಕ ನಿತೀಶ್ ಕುಮಾರ್ ಅವರೊಂದಿಗಿನ ಯಾದವ್ ಅವರ ಸಂಬಂಧ ಹದಗೆಟ್ಟಿತ್ತು. 2017ರ ಬಿಹಾರ್ ವಿಧಾನ ಸಭೆ ಚುನಾವಣೆ ಸಂದರ್ಭ ನೀತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯೊಂದಿಗೆ ಕೈಜೋಡಿಸಿತು. ಇದರಿಂದ ಅಸಮಾಧಾನಗೊಂಡ ಶರದ್ ಯಾದವ್ ಅವರು ಜೆಡಿಯುನಿಂದ ಹೊರಬಂದರು. ಈ ಹಿನ್ನೆಲೆಯಲ್ಲಿ ರಾಜ್ಯ ಸಭೆಯಿಂದ ಅವರನ್ನು ಉಚ್ಚಾಟಿಸಲು ಜೆಡಿಯು ಕೋರಿತ್ತು.
ಆನಂತರ ಶರದ್ ಯಾದವ್ ಅವರು ನಿತೀಶ್ ಕುಮಾರ್ ಅವರಿಂದ ಪ್ರತ್ಯೇಕವಾದರು ಹಾಗೂ ತನ್ನದೇ ಆದ ಲೋಕತಾಂತ್ರಿಕ್ ಜನತಾ ದಳ (ಎಲ್‌ಜೆಡಿ)ವನ್ನು 2018ರಲ್ಲಿ ಆರಂಭಿಸಿದ್ದರು.







