ಆಸ್ಟ್ರೇಲಿಯಾ: ದೇವಸ್ಥಾನದ ಮೇಲೆ ದಾಳಿ ಗೋಡೆಯಲ್ಲಿ ಭಾರತ ವಿರೋಧಿ ಘೋಷಣೆ

ಸಿಡ್ನಿ, ಜ.12: ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಮಿಲ್ಪಾರ್ಕ್ ಪ್ರದೇಶದಲ್ಲಿನ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಗುಂಪುಗಳು ಧ್ವಂಸಗೊಳಿಸಿದೆ ಎಂದು `ಆಸ್ಟ್ರೇಲಿಯಾ ಟುಡೆ' ವರದಿ ಮಾಡಿದೆ.
ತಾನು ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗ ದೇವಸ್ಥಾನದಲ್ಲಿ ದಾಂಧಲೆ ನಡೆಸಲಾಗಿತ್ತು ಮತ್ತು ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು. ದೇವಸ್ಥಾನದ ಎಲ್ಲಾ ಗೋಡೆಗಳಲ್ಲೂ ಹಿಂದುಗಳ ಮೇಲಿನ ಖಲಿಸ್ತಾನಿಗಳ ಧ್ವೇಷದ ಗೀಚುಬರಹಗಳಿದ್ದವು ಎಂದು ದೇವಸ್ಥಾನದ ಉಸ್ತುವಾರಿ ವಹಿಸಿರುವ, ಪಟೇಲ್ ಎಂದು ತನ್ನನ್ನು ಗುರುತಿಸಿಕೊಂಡಿರುವ ವ್ಯಕ್ತಿ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ದ್ವೇಷಸಾಧನೆಯ ಕೃತ್ಯ ಮತ್ತು ದಾಂಧಲೆಯಿಂದ ತೀವ್ರ ಆಘಾತವಾಗಿದ್ದು ಈ ಬಗ್ಗೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಮಂದಿರದ ಆಡಳಿತ ಸಮಿತಿ ಹೇಳಿದೆ.
ಘಟನೆಯಿಂದ ತೀವ್ರ ಆಘಾತವಾಗಿದ್ದು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಭಾರತ ಮತ್ತು ಆಸ್ಟ್ರೇಲಿಯಾದ ಮಧ್ಯೆ ಗಾಢವಾದ ಸ್ನೇಹ ಸಂಬಂಧವಿದ್ದು ಎರಡೂ ದೇಶಗಳ ನಡುವಿನ ಸಂಬಂಧಕ್ಕೆ ಆಸ್ಟ್ರೇಲಿಯಾದಲ್ಲಿನ ಭಾರತೀಯ ಸಮುದಾಯ ಪ್ರಮುಖ ಕೊಡುಗೆ ನೀಡಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬಾನೀಸ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.