ಪೆರು: ತೀವ್ರಗೊಂಡ ಸರಕಾರ ವಿರೋಧಿ ಪ್ರತಿಭಟನೆ

ಲಿಮಾ, ಜ.12: ಕ್ಷಿಪ್ರ ಚುನಾವಣೆ ಹಾಗೂ ಬಂಧನಲ್ಲಿರುವ ಮಾಜಿ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲೊ ಅವರ ಬಿಡುಗಡೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಇನ್ನಷ್ಟು ಪ್ರದೇಶಕ್ಕೆ ವ್ಯಾಪಿಸಿದ್ದು, ಒಂದು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭ ಮೃತಪಟ್ಟವರ ಸಂಖ್ಯೆ 48ಕ್ಕೇರಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ಜನಪ್ರಿಯ ಪ್ರವಾಸಿ ತಾಣ ಕುಸ್ಕೋದಲ್ಲಿ ಸರಕಾರದ ಪಡೆಗಳು ಹಾಗೂ ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ನಡೆದಿದೆ. ಅಧ್ಯಕ್ಷ ಡಿನಾ ಬೊಲಾರೆಟ್ಸ್ ಸರಕಾರ ತಕ್ಷಣ ರಾಜೀನಾಮೆ ಘೋಷಿಸಿ ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ನಗರದ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಭದ್ರತಾ ಪಡೆ ತಡೆದಾಗ ಘರ್ಷಣೆ ನಡೆದಿದ್ದು 37 ನಾಗರಿಕರು ಹಾಗೂ 6 ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ . ಪೆರು ದೇಶದ ದಕ್ಷಿಣಭಾಗದಲ್ಲಿ ಪ್ರತಿಭಟನೆ ವ್ಯಾಪಕವಾಗಿದ್ದು 41 ಪ್ರಾಂತಗಳ ಜನರು ಮಾಜಿ ಅಧ್ಯಕ್ಷರ ಪರವಾಗಿ ಬೀದಿಗಿಳಿದು ಸರಕಾರ ವಿರೋಧಿ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದಾರೆ ಎಂದು ವರದಿಯಾಗಿದೆ.





