ಜ.14ರಿಂದ ಬಂಟ್ವಾಳದಲ್ಲಿ "ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ" ಕಾರ್ಯಕ್ರಮ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ, ಜ. 13: ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಜ.14ರಿಂದ ಜ.26ರವರೆಗೆ “ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ" ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ತಿಳಿಸಿದ್ದಾರೆ.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಬಂಟ್ವಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರನೇ ಪಾದಾಯಾತ್ರೆಯಾಗಿದ್ದು, ಕ್ಷೇತ್ರದ ಜನರ ಬಳಿಗೆ ತೆರಳಿ ಜನಸಾಮಾನ್ಯರ ಕಷ್ಟಗಳ ಬಗ್ಗೆ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಬಗ್ಗೆ ಹಾಗೂ ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.
ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, 2018ರ ಚುನಾವಣೆಯ ಬಳಿಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾಡಿದ್ದಾರೆ. 2023 ಚುನಾವಣೆಯ ದೃಷ್ಟಿಯಿಂದ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ತಯಾರಿಸುವುದು ಹಾಗೂ ಮುಂದಿನ ಯೋಜನೆಗಳಿಗೆ ಪೂರ್ವ ತಯಾರಿಯ ಉದ್ದೇಶದಿಂದ ನಡೆಯುವ ಪಾದಯಾತ್ರೆಯ ಸಿದ್ದತೆಗಳು ನಡೆದಿವೆ ಎಂದ ಅವರು, ವಿಕಾಸ ಯಾತ್ರೆಯ ಮೂಲಕ ಫಲಾನುಭವಿಗಳಿಗೆ ಯೋಜನೆಗಳನ್ನು ನೆನಪಿಸುವುದು ಹಾಗೂ ಕಾರ್ಯಕರ್ತರನ್ನು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ಗ್ರಾಮವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆ ಎಂಬ ವಿಶಿಷ್ಟ ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಅನೇಕ ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದು, ಸಚಿವರಾದ ಸುನೀಲ್ ಕುಮಾರ್, ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ, ಅಶ್ವತ್ಥನಾರಾಯಣ, ಬಿಜೆಪಿ ನಾಯಕರಾದ ಅಣ್ಣಾಮಲೈ, ಸುರೇಂದ್ರನ್, ಶೋಭಾ ಕರಂದ್ಲಾಜೆ ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಮಾದವ ಮಾವೆ, ಸುಲೋಚನ ಜಿ.ಕೆ.ಭಟ್ ಮೊದಲಾದವರು ಉಪಸ್ಥಿತರಿದ್ದರು