ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್ಸಿನಲ್ಲಿರುವ ಸೀಟಿನಷ್ಟು ಶಾಸಕರನ್ನು ಗೆದ್ದರೆ ಅದೇ ಹೆಚ್ಚು: ಅಶ್ವತ್ಥ ನಾರಾಯಣ್

ಬೆಂಗಳೂರು, ಜ.13: ಪ್ರತಿಪಕ್ಷ ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್ಸಿನಲ್ಲಿರುವ ಸೀಟಿನಷ್ಟು ಶಾಸಕರನ್ನು ರಾಜ್ಯದಲ್ಲಿ ಗೆದ್ದರೆ ಅದೇ ಹೆಚ್ಚು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, 40ರಿಂದ 50 ಶಾಸಕ ಸ್ಥಾನ ಗೆಲ್ಲುವುದೂ ಅಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 120ಕ್ಕಿಂತ ಹೆಚ್ಚಿದ್ದ ಸ್ಥಾನಗಳನ್ನು 79ಕ್ಕೆ ಇಳಿಸಿದ್ದು ಸಿದ್ದರಾಮಯ್ಯರ ಸಾಧನೆ. ನಿದ್ರೆ ರಾಮಯ್ಯ, ಎಸಿಬಿ ರಾಮಯ್ಯ ಸೇರಿ ಹಲವು ಹೆಸರು ಅವರಿಗಿದೆ ಎಂದು ಟೀಕಿಸಿದರು.
ಸಂವಿಧಾನದ ಆಶಯವನ್ನು ಗೌರವಿಸದ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ಭಯಭೀತ ಕಾಂಗ್ರೆಸ್ಸಿಗರು ಹಗಲುಗನಸಿನೊಂದಿಗೆ ಯಾತ್ರೆ ಮಾಡುತ್ತಿದ್ದಾರೆ. 50 ಸೀಟಿನೊಂದಿಗೆ ಎರಡನೆ ಸ್ಥಾನ ಜೆಡಿಎಸ್‍ಗೆ ಸಿಗುತ್ತದೋ ಅಥವಾ ಕಾಂಗ್ರೆಸ್‍ಗೂ ಎಂದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಕನಿಷ್ಠ ಸ್ಥಾನಕ್ಕೆ ಇಳಿದಂತೆ ಇಲ್ಲಿಯೂ ಆಗಲಿದೆ. ಆ ಪಕ್ಷವು ಭರವಸೆ ಇಲ್ಲದೆ ಸೊರಗಿದೆ ಎಂದು ಅವರು ನುಡಿದರು.
ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಪ್ರವಾಸವು ಅರ್ಥಹೀನ, ಕಾಂಗ್ರೆಸ್ ಪಕ್ಷದೊಳಗೆ ಅವರು ಪ್ರಜಾಪ್ರಭುತ್ವ, ಪ್ರಜಾಧ್ವನಿಗೆ ಗೌರವ ಕೊಟ್ಟಿಲ್ಲ. ಆ ಪಕ್ಷದ ಮೂಲಸ್ತಂಭವೆ ಕುಟುಂಬ. ಆ ಪಕ್ಷದಲ್ಲಿ ಪ್ರಜಾಪ್ರಭುತ್ವಕ್ಕೆ ಏನೂ ಮಹತ್ವ ಇಲ್ಲ. ಮಾನ್ಯತೆಯೂ ಇಲ್ಲ. ಆ ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅದರ ಇಚ್ಛೆ, ಮೂಲ ಉದ್ದೇಶಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಶಾಸಕ ಪಿ.ರಾಜೀವ್ ಮಾತನಾಡಿ, ರಾಜ್ಯ ಮತ್ತು ದೇಶವನ್ನು 60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಇವತ್ತು ಪ್ರಜಾಧ್ವನಿ ಯಾತ್ರೆ ಕೈಗೊಂಡಿದೆ. ಅದು ಕಾಂಗ್ರೆಸ್ ಮಾಡಿದ ದ್ರೋಹಕ್ಕೆ ಶೋಕದ ಯಾತ್ರೆ. ದೇಶಕ್ಕೆ ಮಾಡಿದ ಅಕ್ಷಮ್ಯ ಅಪರಾಧಕ್ಕಾಗಿ ಇದು ಪ್ರಜಾದ್ರೋಹ ಯಾತ್ರೆ ಎಂದು ಜನತೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
.
ಕಾಂಗ್ರೆಸ್ ಓಡುವ ಬಸ್ಸಲ್ಲ:
‘ಪ್ರಜೆಗಳ ಧ್ವನಿಯನ್ನು ಕಾಂಗ್ರೆಸ್ ಆಲಿಸಿದ್ದರೆ ಇವತ್ತು ಆ ಪಕ್ಷಕ್ಕೆ ಇಂತಹ ದುರ್ಗತಿ ಬರುತ್ತಿರಲಿಲ್ಲ. ಕಾಂಗ್ರೆಸ್‍ನದು ಓಡುವ ಬಸ್ಸಲ್ಲ. ದೂಡುವ ಬಸ್ಸಾಗಿದೆ. ಒಬ್ಬರ ಕೈಯಲ್ಲೇ ಸ್ಟೇರಿಂಗ್ ಇರದ ಬಸ್ ಅದು. ಸಿದ್ದರಾಮಯ್ಯರ ಕೈಯಲ್ಲಿ ಸ್ಟೇರಿಂಗ್ ಇದ್ದರೆ ಡಿ.ಕೆ.ಶಿವಕುಮಾರ್ ಕಾಲಲ್ಲಿ ಬ್ರೇಕ್ ಇದೆ. ಕಾಂಗ್ರೆಸ್ ಪ್ರಜೆಗಳ ಧ್ವನಿಯನ್ನು ಆಲಿಸಿದ್ದರೆ ಭಗತ್ ಸಿಂಗ್ ನೇಣಿಗೆ ಏರುವುದನ್ನು ತಪ್ಪಿಸಬಹುದಾಗಿತ್ತು’
-ಪಿ.ರಾಜೀವ್ ಶಾಸಕ







