ಎಸ್‍ಸಿ-ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಳ: ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು, ಜ. 13: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‍ಸಿ/ಎಸ್‍ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ವಿಧೇಯಕ-2022ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಅಂಕಿತ ಹಾಕಿದ್ದಾರೆ.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಶಿಫಾರಸ್ಸನ್ನು ಆಧರಿಸಿ ರಾಜ್ಯ ಸರಕಾರ ಎಸ್‍ಸಿ ಎಸ್‍ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ‘ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ-2022’ ಅನ್ನು ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿತ್ತು.
ಇದೀಗ ಆ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಪರಿಶಿಷ್ಟ ಜಾತಿ(ಎಸ್‍ಸಿ)ಗೆ ಶೇ.15ರಷ್ಟಿದ್ದ ಮೀಸಲಾತಿ ಶೇ.17 ಹಾಗೂ ಪರಿಶಿಷ್ಟ ಪಂಗಡ(ಎಸ್‍ಟಿ)ದ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ ಅಧ್ಯಾದೇಶ ಹೊರಡಿಸಲಾಗಿತ್ತು. ಇದೀಗ ಆ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಸರಕಾರ ಕಾನೂನು ಸ್ವರೂಪ ನೀಡಿದೆ.





