ಮಂಗಳೂರು: ಮಹಿಳಾ ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಜೊತೆ ಚಿತ್ರನಟಿಯ ಸಂವಾದ

ಮಂಗಳೂರು: ನಗರದ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಜೊತೆ ಹಿರಿಯ ನಟಿ ಭವ್ಯಾ ಶುಕ್ರವಾರ ಸಂವಾದ ನಡೆಸಿದರು.
ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು ‘ನನ್ನ ನಟನಾ ಜೀವನದ ಆರಂಭದ ‘ಪ್ರೇಮಪರ್ವ’ ಚಿತ್ರದಲ್ಲಿ ಎಸ್. ಸಿದ್ದಲಿಂಗಯ್ಯ ಜತೆಗಿನ ಒಡನಾಟವು ನನ್ನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಯಿತು. ನಮ್ಮ ಸಾಧನೆಯಲ್ಲಿ ನಮ್ಮ ವ್ಯಕ್ತಿತ್ವವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದರು
ನನ್ನ ವ್ಯಕ್ತಿತ್ವದಲ್ಲಿ ತಾಯಿ ನನಗೆ ಪ್ರೇರಣೆಯಾಗಿದ್ದರು. ವಿವಾಹದ ಬಳಿಕ ಪತಿ ಮನೆಯಿಂದಲೂ ಸಹಕಾರ ದೊರಕಿದ ಕಾರಣ ನಾನು ಇಂದಿಗೂ ನಟನಾ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಾಗಿದೆ ಎಂದು ನಟಿ ಭವ್ಯಾ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ದುಡಿಯುವ ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಯ ಜತೆಗೆ ತಮ್ಮ ಕರ್ತವ್ಯವನ್ನು ಒತ್ತಡದಲ್ಲಿಯೇ ನಿರ್ವಹಿಸಬೇಕಾಗುತ್ತದೆ. ಕೆಲಸದ ಒತ್ತಡದ ನಡುವೆಯೂ ಮನೆಯ ಎಲ್ಲಾ ಸದಸ್ಯರೊಂದಿಗೆ ಬೆರೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ ಮಹಿಳಾ ಪೊಲೀಸರು ತಮ್ಮ ಕರ್ತವ್ಯದ ಜತೆ ಕುಟುಂಬದ ಜವಾಬ್ಧಾರಿಯನ್ನೂ ಹೊಂದಿರುತ್ತಾರೆ. ಹಾಗಾಗಿ ಒತ್ತಡ ನಿವಾರಣೆಗೆ ಈ ರೀತಿ ಸಾಧಕರ ಸ್ಪೂರ್ತಿಯ ಮಾತುಗಳು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ಡಿವೈಎಸ್ಪಿ ಡಾ. ಗಾನ ಕುಮಾರಿ, ಎಸಿಪಿಗಳಾದ ಪಿ.ಎ. ಹೆಗ್ಡೆ, ರವೀಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಎಸಿಪಿ ಗೀತಾ ಕುಲಕರ್ಣಿ ಸ್ವಾಗತಿಸಿದರು.