ಮಣಿಪಾಲ: ಜ.14 ರಂದು ಕರಾವಳಿಯ ನಾಲ್ವರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ
ಮಹಾಬಲೇಶ್ವರ ಎಂ.ಎಸ್., ಅಮೈ ಮಹಾಲಿಂಗ ನಾಯ್ಕ್ ಆಯ್ಕೆ

ಉಡುಪಿ, ಜ.13: ಕೃಷಿಕ ಕೇಪು ಅಡ್ಯನಡ್ಕದ ಅಮೈ ಮಹಾಲಿಂಗ ನಾಯ್ಕ್, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಸೇರಿದಂತೆ ಕರಾವಳಿಯ ನಾಲ್ವರು ಸಾಧಕರನ್ನು ಈ ಬಾರಿಯ ಹೊಸ ವರ್ಷ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಮಣಿಪಾಲ ಎಜ್ಯುಕೇಷನ್ ಆ್ಯಂಡ್ ಮೆಡಿಕಲ್ ಗ್ರೂಫ್ ಬೆಂಗಳೂರು, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಮಣಿಪಾಲ ಹಾಗೂ ಡಾ.ಟಿಎಂಎ ಪೈ ಫೌಂಡೇಷನ್ ಮಣಿಪಾಲ ಸಂಯುಕ್ತವಾಗಿ ಪ್ರತಿವರ್ಷ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರಾವಳಿಯ ಸಾಧಕರನ್ನು ಹೊಸ ವರ್ಷದ ಪ್ರಶಸ್ತಿಗೆ (ನ್ಯೂ ಇಯರ್ ಅವಾರ್ಡ್) ಆಯ್ಕೆ ಮಾಡುತ್ತಿವೆ.
ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಆರ್ಥೋಪೆಡಿಕ್ಸ್ ವಿಭಾಗದ ಪ್ರೊಪೆಸರ್ ಹಾಗೂ ಮಾಜಿ ಡೀನ್ ಡಾ. ಪಾಂಗಾಲ ಶ್ರೀಪತಿ ರಾವ್ ಮತ್ತು ಮಣಿಪಾಲ ಮಾಹೆಯ ಮಾಜಿ ವಿದ್ಯಾರ್ಥಿ ವ್ಯವಹಾರ ನಿರ್ದೇಶಕಿ ಹಾಗೂ ಪಿಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪರಿ ಡಾ.ಪುಷ್ಪಾ ಜಿ.ಕಿಣಿ ಇವರು ಪ್ರಶಸ್ತಿ ಸ್ವೀಕರಿಸಲಿರುವ ಇನ್ನಿಬ್ಬರು ಗಣ್ಯರು. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ಜ.14ರ ಶನಿವಾರ ಸಂಜೆ 5:30ಕ್ಕೆ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ನಡೆಯಲಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹೆಯ ಅಧ್ಯಕ್ಷ ಹಾಗೂ ಎಂಇಎಂಜಿ ಚಯರ್‌ಮೆನ್ ಡಾ.ರಂಜನ್ ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು.ಪೈ ಹಾಗೂ ಮಣಿಪಾಲದ ಡಾ.ಟಿಎಂಎ ಪೈ ಫೌಂಡೇಷನ್‌ನ ಅಧ್ಯಕ್ಷ ಟಿ.ಅಶೋಕ ಪೈ ಉಪಸ್ಥಿತರಿರುವರು ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.