ರಾಜ್ಯ ಸರಕಾರದ ಜೊತೆಗಿನ ಸೈದ್ಧಾಂತಿಕ ಸಂಘರ್ಷವನ್ನು ರಾಜ್ಯಪಾಲರು ನಿಲ್ಲಿಸಬೇಕು: ರಾಷ್ಟ್ರಪತಿಗೆ ತಮಿಳುನಾಡು ಸಿಎಂ ಮನವಿ

ಹೊಸದಿಲ್ಲಿ, ಜ. 13: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ರಾಜ್ಯ ಸರಕಾರದೊಂದಿಗೆ ‘‘ರಾಜಕೀಯ ಸೈದ್ಧಾಂತಿಕ ಸಂಘರ್ಷ’’ದಲ್ಲಿ ತೊಡಗಿದ್ದಾರೆ; ಹಾಗೆ ಮಾಡದಂತೆ ಅವರಿಗೆ ಬುದ್ಧಿ ಹೇಳಬೇಕು ಎಂದು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸಭಾ ಅಧಿವೇಶನದ ಆರಂಭದಲ್ಲಿ, ಸಾಂಪ್ರದಾಯಿಕ ಭಾಷಣದ ವೇಳೆ ರಾಜ್ಯಪಾಲರು ರಾಜ್ಯ ಸರಕಾರ ಸಿದ್ಧಪಡಿಸಿರುವ ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟು ತನ್ನದೇ ಆದ ಭಾಷಣವನ್ನು ಓದಿದ್ದರು. ಆಗ, ರಾಜ್ಯ ಸರಕಾರ ಅನುಮೋದಿಸಿರುವ ಭಾಷಣವನ್ನು ಮಾತ್ರ ದಾಖಲೆಗೆ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ರನ್ನು ಕೋರುವ ನಿರ್ಣಯವನ್ನು ಮುಖ್ಯಮಂತ್ರಿ ಸ್ಟಾಲಿನ್ ಮಂಡಿಸಿದರು. ಇದರಿಂದ ಕೋಪಗೊಂಡು ರಾಜ್ಯಪಾಲರು ಸದನದಿಂದ ಹೊರನಡೆದರು. ರಾಜ್ಯಪಾಲರ ವರ್ತನೆಯನ್ನು ಪ್ರತಿಭಟಿಸಿ ಆಡಳಿತಾರೂಢ ಡಿಎಮ್ಕೆ ಮತ್ತು ಅದರ ಮಿತ್ರಪಕ್ಷಗಳು ಪ್ರತಿಭಟನೆ ನಡೆಸಿದವು.
ಅದಾದ ಮೂರು ದಿನಗಳ ಬಳಿಕ, ಸ್ಟಾಲಿನ್ ರಾಷ್ಟ್ರಪತಿಗೆ ಈ ಪತ್ರವನ್ನು ಬರೆದಿದ್ದಾರೆ.
ವಿಧಾನಸಭಾ ಘಟನೆ ನಡೆಯುವ ಒಂದು ವಾರದ ಮೊದಲು, ರಾಜ್ಯಕ್ಕೆ ‘ತಮಿಳುನಾಡು’ ಎಂಬ ಹೆಸರಿಗಿಂತ ‘ತಮಿಳಗಮ್’ ಎಂಬ ಹೆಸರು ಹೆಚ್ಚು ಸೂಕ್ತವಾಗಿದೆ ಎಂಬುದಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದರು. ಈ ಹೇಳಿಕೆಗೂ ಡಿಎಮ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
‘‘ವಿಧಾನಸಭೆಯಲ್ಲಿ ರಾಜ್ಯಪಾಲರ ವರ್ತನೆಗಳು ಸದನದ ಸಂಪ್ರದಾಯಗಳಿಗೆ ವಿರುದ್ಧವಾಗಿವೆ. ರಾಜ್ಯಪಾಲರದು ಉನ್ನತ ಹುದ್ದೆಯಾಗಿದ್ದು, ಅದನ್ನು ನಿಭಾಯಿಸುವ ವ್ಯಕ್ತಿಯು ರಾಜಕೀಯಕ್ಕೆ ಅತೀತವಾಗಿರಬೇಕು’’ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ. ‘‘ಆದರೆ, ರಾಜ್ಯಪಾಲ ರವಿ ತಮಿಳುನಾಡು ಸರಕಾರದೊಂದಿಗೆ ರಾಜಕೀಯ ಪ್ರೇರಿತ ಸೈದ್ಧಾಂತಿಕ ಸಂಘರ್ಷವನ್ನು ನಡೆಸುತ್ತಿದ್ದಾರೆ. ಇದು ನಮ್ಮ ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದೆ’’ ಎಂದು ಸ್ಟಾಲಿನ್ ತನ್ನ ಪತ್ರದಲ್ಲಿ ಬರೆದಿದ್ದಾರೆ.
ತಮಿಳುನಾಡಿನಲ್ಲಿ ದ್ರಾವಿಡ ನೀತಿಗಳು ಹಾಗೂ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ವೈಚಾರಿಕ ಚಿಂತನೆಯಂಥ ತತ್ವಗಳನ್ನು ಅನುಸರಿಸಲಾಗುತ್ತಿದೆ. ಅದನ್ನು ರಾಜ್ಯಪಾಲ ರವಿಗೆ ಸಹಿಸಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.
ರಾಜ್ಯ ಕಾನೂನು ಸಚಿವ ಎಸ್. ರಘುಪತಿ ನೇತೃತ್ವದ ನಿಯೋಗವೊಂದು ಸ್ಟಾಲಿನ್ರ ಪತ್ರವನ್ನು ಗುರುವಾರ ರಾಷ್ಟ್ರಪತಿಗೆ ನೀಡಿತು.ಪತ್ರದಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳನ್ನು ಪರಿಶೀಲಿಸುವ ಭರವಸೆಯನ್ನು ರಾಷ್ಟ್ರಪತಿ ನೀಡಿದ್ದಾರೆ ಎಂದು ಲೋಕಸಭೆಯಲ್ಲಿ ಡಿಎಮ್ಕೆಯ ಶಾಸಕಾಂಗ ಪಕ್ಷ ನಾಯಕ ಟಿ.ಆರ್. ಬಾಲು ಹೇಳಿದರು.
‘‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ನೀತಿಗಳನ್ನು ತಮಿಳುನಾಡಿನ ಮೇಲೆ ಹೇರಲು ರವಿ ಪ್ರಯತ್ನಿಸುತ್ತಿದ್ದಾರೆ. ಆದರೆ ಪೆರಿಯಾರ್, ಅಣ್ಣಾ ಮತ್ತು ಕಲೈನಾರ್ ಅವರ ನೆಲದಲ್ಲಿ ಅವರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ’’ ಎಂದು ಬಾಲು ಹೇಳಿದರು.







