ಕೋಮು ವೈಷಮ್ಯದಿಂದ ಬೇಸತ್ತ ಜನ: ಹಿರಿಯ ಪತ್ರಕರ್ತ ಜಿ.ಯು. ಭಟ್ಟ ವಿಷಾದ
ಜಮಾಅತೆ ಇಸ್ಲಾಮಿ ಹಿಂದ್ ಮಾಧ್ಯಮ ಸಂವಾದ ಕಾರ್ಯಕ್ರಮ

ಭಟ್ಕಳ: ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿನ ಜನರು ಕೋಮುವೈಷಮ್ಯದಿಂದಾಗಿ ಬೇಸತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಹೊನ್ನಾವರ ಹೇಳಿದ್ದಾರೆ.
ಅವರು ಗುರುವಾರ ಇಲ್ಲಿನ ರಾಯಲ್ ಓಕ್ ಹೊಟೇಲ್‌ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಶೇ.90 ಮಂದಿ ಶಾಂತಿ ಸೌಹಾರ್ದತೆಯನ್ನು ಬಯಸಿದರೆ ಶೇ.90 ಮಂದಿ ರಾಜಕಾರಣಿಗಳು ಕೋಮುಸಂಘರ್ಷ ಬಯಸುತ್ತಾರೆ. ಇದಕ್ಕಾಗಿಯೇ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದ ಅವರು, ಕೋಮುಗಲಭೆಗಳಲ್ಲಿ ಬಡವರ ಮಕ್ಕಳು ಸಾಯುತ್ತಾರೆ. ಶ್ರೀಮಂತರ ಮಕ್ಕಳು ಸುರಕ್ಷಿತರಾಗಿರುತ್ತಾರೆ. ದೇಶದಲ್ಲಿ ನಡೆಯುತ್ತಿರುವ ಎಲ್ಲ ಅತಿರೇಕಗಳಿಗೆ ಒಂದು ದಿನ ಕಡಿವಾಣ ಬೀಳಲಿದೆ. ಎಲ್ಲರೂ ಕೂಡ ಸಂಘರ್ಷದಿಂದ ಹೊರಬರಬೇಕು. ಇಂತಹ ಸಂವಾದಗಳು, ಪರಸ್ಪರರನ್ನು ಅರಿಯುವ ಕಾರ್ಯಕ್ರಮಗಳು ಇದಕ್ಕೆ ಸಹಕಾರಿಯಾಗಬಲ್ಲವು ಎಂದರು. ಧರ್ಮಗಳಲ್ಲಿನ ಹುಳುಕುಗಳನ್ನು ಹುಡುಕುವುದಕ್ಕಿಂತ ಆಯಾ ಧರ್ಮದ ಒಳ್ಳೆಯ ಅಂಶಗಳನ್ನು ತಿಳಿದುಕೊಳ್ಳಬೇಕು. ಹಿಂದೂ ಧರ್ಮದಲ್ಲಿಯೂ ನಾನಾ ರೀತಿಯ ಕೊರತೆಗಳಿವೆ. ರಾಮಾನುಜಾಚಾರ್ಯ, ಮಧ್ವಾಚಾರ್ಯ ಸೇರಿದಂತೆ ವಿವಿಧ ಸಿದ್ಧಾಂತಗಳಲ್ಲಿ ವೈರುಧ್ಯಗಳಿವೆ. ಹಾಗೆಯೆ ಬಸವಣ್ಣನವರ ವಚನಗಳು ದೇವರಿಗಿಂತ ನಾಸ್ತಿಕತೆಗೆ ಹೆಚ್ಚಿನ ಒತ್ತು ನೀಡಿವೆ. ಈ ಎಲ್ಲ ವೈವಿಧ್ಯತೆಗಳಲ್ಲಿ ಏಕತೆಯನ್ನು ಕಂಡು ಕೊಳ್ಳುತ್ತ ನಾವು ಬದುಕುತ್ತಿದ್ದೇವೆ ಎಂದರು.
ಜಿ.ಯು. ಭಟ್ಟ ಅವರನ್ನು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸನ್ಮಾನಿಸಿ ಗೌರವಿಸಿದರು. ಮುಹಮ್ಮದ್ ರಝಾ ಮಾನ್ವಿ ಸನ್ಮಾನ ಪತ್ರವನ್ನು ಓದಿದರು. ಮುಖಂಡರಾದ ತಲ್ಹಾ ಸಿದ್ದಿಬಾಪ, ಮೌಲಾನ ಸೈಯದ್ ಝುಬೇರ್ ಉಪಸ್ಥಿತರಿದ್ದರು.
.jpeg)







