ಹಾಕಿ ವಿಶ್ವಕಪ್: ಸ್ಪೇನ್ ವಿರುದ್ಧ ಭಾರತ ಶುಭಾರಂಭ
ರೋಹಿದಾಸ್, ಹಾರ್ದಿಕ್ ತಲಾ ಒಂದು ಗೋಲು

ರೂರ್ಕೆಲಾ, ಜ.13: ಸುಮಾರು 48 ವರ್ಷಗಳ ಬಳಿಕ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಗೆಲ್ಲುವತ್ತ ಚಿತ್ತಹರಿಸಿರುವ ಆತಿಥೇಯ ಭಾರತ ನೂತನವಾಗಿ ನಿರ್ಮಿಸಲ್ಪಟ್ಟಿರುವ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿದೆ.
ಪಂದ್ಯದ ಮೊದಲ 30 ನಿಮಿಷಗಳಲ್ಲಿಯೇ ತಲಾ ಒಂದು ಗೋಲು ಗಳಿಸಿದ ಅಮಿತ್ ರೋಹಿದಾಸ್(12ನೇ ನಿಮಿಷ, ಪೆನಾಲ್ಟಿ ಕಾರ್ನರ್‌ನಲ್ಲಿ)ಹಾಗೂ ಹಾರ್ದಿಕ್ ಸಿಂಗ್(26ನೇ ನಿಮಿಷ) ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ರೋಹಿದಾಸ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಿದ ಹರ್ಮನ್‌ಪ್ರೀತ್ ಸಿಂಗ್ ಬಳಗ ದ್ವಿತೀಯಾರ್ಧದಲ್ಲಿ ಗೋಲು ಗಳಿಸದೆ ಇದ್ದರೂ ತನ್ನ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತವು 2023ರ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಸ್ಪೇನ್ ತಂಡದ ಆಟಗಾರನಿಗೆ ಡಿಕ್ಕಿ ಹೊಡೆದ ಕಾರಣ ಹಳದಿ ಕಾರ್ಡ್ ಪಡೆದ ಅಭಿಷೇಕ್ 10 ನಿಮಿಷ ಪಂದ್ಯ ಆಡುವುದರಿಂದ ಅಮಾನತುಗೊಂಡರು. ಆಗ ಭಾರತ 10 ಆಟಗಾರರೊಂದಿಗೆ ಆಡಿದರೂ ರಕ್ಷಣಾ ವಿಭಾಗದ ಉತ್ತಮ ಪ್ರಯತ್ನದ ಮೂಲಕ ಸ್ಪೇನ್‌ಗೆ ಗೋಲನ್ನು ನಿರಾಕರಿಸಿತು. ಇದರೊಂದಿಗೆ ಭಾರತವು ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿತು.
ಭಾರತವು ಸ್ಪೇನ್ ವಿರುದ್ಧ ಆಡಿರುವ 32ನೇ ಪಂದ್ಯದಲ್ಲಿ 14ನೇ ಬಾರಿ ಗೆಲುವು ದಾಖಲಿಸಿದೆ. ಸ್ಪೇನ್ 11 ಬಾರಿ ಗೆಲುವು ದಾಖಲಿಸಿದ್ದರೆ, 7 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಶುಕ್ರವಾರ ಭಾರತ ಹಾಗೂ ಸ್ಪೇನ್ ನಡುವಿನ ಪಂದ್ಯ ಆರಂಭಕ್ಕೆ ಮೊದಲು ಸುಡುಮದ್ದನ್ನು ಸಿಡಿಸಲಾಯಿತು. 20,000 ಹಾಕಿ ಅಭಿಮಾನಿಗಳು ಭಾರತೀಯ ತಂಡದೊಂದಿಗೆ ರಾಷ್ಟ್ರಗೀತೆಯನ್ನು ಏಕಕಾಲದಲ್ಲಿ ಹಾಡಿದ್ದು ಎಲ್ಲರನ್ನೂ ರೋಮಾಂಚನಗೊಳಿಸಿತು.





