ಕಳೆದ ಒಂದೂವರೆ ವರ್ಷಗಳಲ್ಲಿ ಜಮ್ಮು ಪ್ರದೇಶದಲ್ಲಿನ ಎಲ್ಲ ಭಯೋತ್ಪಾದಕ ದಾಳಿಗಳ ತನಿಖೆ ಎನ್ಐಎ ನಡೆಸಲಿದೆ: ಶಾ

ಜಮ್ಮು,ಜ.13: ಕಳೆದ ಒಂದೂವರೆ ವರ್ಷಗಳಲ್ಲಿ ಜಮ್ಮು ಪ್ರದೇಶದಲ್ಲಿ ನಡೆದಿರುವ ಎಲ್ಲ ಭಯೋತ್ಪಾದಕ ದಾಳಿಗಳ ತನಿಖೆಯನ್ನು ಎನ್ಐಎ ನಡೆಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶುಕ್ರವಾರ ಇಲ್ಲಿ ತಿಳಿಸಿದರು. ತನಿಖೆಗಳಲ್ಲಿ ಜಮ್ಮ-ಕಾಶ್ಮೀರ ಪೊಲೀಸರು ಎನ್ಐಎಗೆ ನೆರವಾಗಲಿದ್ದಾರೆ ಎಂದೂ ಅವರು ಹೇಳಿದರು.
ಶಾ ಅವರ ಹೇಳಿಕೆಯಂತೆ ಜ.1 ಮತ್ತು 2ರಂದು ರಾಜೌರಿಯ ಧಾಂಗ್ರಿ ಗ್ರಾಮದಲ್ಲಿ ಏಳು ನಾಗರಿಕರನ್ನು ಬಲಿ ತೆಗೆದುಕೊಂಡಿದ್ದ ಭಯೋತ್ಪಾದಕ ದಾಳಿಗಳ ತನಿಖೆಯನ್ನೂ ಎನ್ಐಎ ನಡೆಸಲಿದೆ.
ಭದ್ರತಾ ಸ್ಥಿತಿಯ ಪುನರ್ಪರಿಶೀಲನೆಗಾಗಿ ಶುಕ್ರವಾರ ಇಲ್ಲಿಗೆ ಒಂದು ದಿನದ ಭೇಟಿ ನೀಡಿದ್ದ ಶಾ,ಮೂರು ತಿಂಗಳುಗಳಲ್ಲಿ ಜಮ್ಮು ವಿಭಾಗದ ಎಲ್ಲ ಪ್ರದೇಶಗಳಾದ್ಯಂತ ಭದ್ರತಾ ಜಾಲವನ್ನು ಬಿಗುಗೊಳಿಸಲು ಕಾಲಮಿತಿಯ ಕ್ರಿಯಾಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ರಾಜೌರಿ ಹಂತಕರ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು 50ಕ್ಕೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಾ ಅವರು ಭದ್ರತಾ ಸಂಸ್ಥೆಗಳು ಮತ್ತು ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಪುನರ್ಪರಿಶೀಲನಾ ಸಭೆಯಲ್ಲಿ ಲೆ.ಗ.ಮನೋಜ ಸಿನ್ಹಾ,ಮುಖ್ಯ ಕಾರ್ಯದರ್ಶಿ ಎ.ಕೆ.ಮೆಹ್ತಾ, ಉತ್ತರ ಸೇನಾ ವಿಭಾಗದ ಕಮಾಂಡರ್ ಲೆ.ಜ.ಉಪೇಂದ್ರ ದ್ವಿವೇದಿ ಮತ್ತು ಡಿಜಿಪಿ ದಿಲ್ಬಾಗ್ ಸಿಂಗ್ ಅವರೂ ಉಪಸ್ಥಿತರಿದ್ದರು. ಪ್ರದೇಶದಲ್ಲಿಯ ಪ್ರಚಲಿತ ಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸಲಾಗಿದ್ದು,ಭಯೋತ್ಪಾದನೆ ಬೆಂಬಲ ವ್ಯವಸ್ಥೆಯ ಕುರಿತು ಎಳೆಎಳೆಯಾಗಿ ಚರ್ಚಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಲೋಪರಹಿತ ಭದ್ರತೆಯ ಬಗ್ಗೆ ಭದ್ರತಾ ಸಂಸ್ಥೆಗಳು ತನಗೆ ಭರವಸೆ ನೀಡಿವೆ ಎಂದು ಶಾ ತಿಳಿಸಿದರು.
ಧಾಂಗ್ರಿ ಗ್ರಾಮದಲ್ಲಿ ಭಯೋತ್ಪಾದಕರ ದಾಳಿಗಳಲ್ಲಿ ಮೃತರ ಕುಟುಂಬಗಳನ್ನು ಭೇಟಿಯಾಗುವುದು ಶಾ ಕಾರ್ಯಕ್ರಮದಲ್ಲಿ ಸೇರಿತ್ತಾದರೂ ಪ್ರತಿಕೂಲ ಹವಾಮಾನದಿಂದಾಗಿ ಅವರಿಗೆ ರಾಜೌರಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆದರೂ ಜಮ್ಮುವಿನಿಂದ ದೂರವಾಣಿ ಮೂಲಕ ಸಂತ್ರಸ್ತ ಕುಟುಂಬಗಳೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು.
‘ಮುಂದಿನ ಮೂರು ದಿನಗಳ ಪ್ರತಿಕೂಲ ಹವಾಮಾನವಿರಲಿದೆ ಎಂದು ವರದಿಯು ತಿಳಿಸಿದೆ. ನಾನು ಮತ್ತೆ ಬರುತ್ತೇನೆ ಮತ್ತು ಖಂಡಿತವಾಗಿಯೂ ರಾಜೌರಿ ದಾಳಿಯ ಸಂತ್ರಸ್ತರನ್ನು ಭೇಟಿಯಾಗುತ್ತೇನೆ. ಇಂದು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಎಲ್ಲ ಬೆಂಬಲವನ್ನು ಒದಗಿಸುವ ಭರವಸೆಯನ್ನು ನೀಡಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರೂ ಭಯೋತ್ಪಾದನೆಯ ವಿರುದ್ಧ ಹೋರಾಡಲು ಅವರು ಸಿದ್ಧರಾಗಿದ್ದಾರೆ ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾ ತಿಳಿಸಿದರು.







