ಅಮೆರಿಕ ವಿಮಾನ ಹಾರಾಟ ವ್ಯವಸ್ಥೆಯ ವೈಫಲ್ಯಕ್ಕೆ ಸಿಬ್ಬಂದಿ ಕಾರಣ: ವರದಿ

ವಾಷಿಂಗ್ಟನ್, ಜ.13: ಸಿಬಂದಿಯ ಎಡವಟ್ಟಿನಿಂದ ಡೇಟಾಫೈಲ್ ಹಾನಿಯಾಗಿರುವುದು ಬುಧವಾರ ಅಮೆರಿಕದ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲು ಕಾರಣವಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಗುರುವಾರ ವರದಿ ಮಾಡಿದೆ. ಕಂಪ್ಯೂಟರ್ ಫೈಲ್ಗೆ ಹಾನಿಯಾಗಲು ‘ಅನಿರ್ಧಿಷ್ಟ ಸಂಖ್ಯೆಯ ಸಿಬಂದಿ’ ಹೊಣೆಯಾಗಿದ್ದಾರೆ.
ಇದರಿಂದ ವಿಮಾನದ ಪೈಲಟ್ಗಳು ಮತ್ತು ಸಿಬಂದಿಗಳಿಗೆ ಸಕಾಲಿಕ ಸಂದೇಶ ಮತ್ತು ಎಚ್ಚರಿಕೆಗಳನ್ನು ರವಾನಿಸುವ ‘ನೋಟಂ’ ವ್ಯವಸ್ಥೆ ವಿಫಲಗೊಂಡಿದೆ ಎಂದು ಹೇಳಿಕೆ ತಿಳಿಸಿದೆ. ಕಂಪ್ಯೂಟರ್ ವ್ಯವಸ್ಥೆಯ ಗುತ್ತಿಗೆ ವಹಿಸಿಕೊಂಡವರು ನೇಮಿಸಿದ್ದ ಇಬ್ಬರು ಸಿಬಂದಿಗಳು ‘ನೋಟಂ’ ಎಂದು ಕರೆಯಲ್ಪಡುವ ಪ್ರಮುಖ ವ್ಯವಸ್ಥೆಯಲ್ಲಿ ತಪ್ಪೆಸಗಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಸ್ಪಷ್ಟವಾಗಿದೆ.
ಈ ಇಬ್ಬರು ಸಿಬಂದಿಗಳು ಆಕಸ್ಮಿಕವಾಗಿ ಈ ಕೃತ್ಯ ಎಸಗಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಎಸಗಿದ್ದಾರೆಯೇ, ಯಾವುದೇ ದುರುದ್ದೇಶಪೂರಿತ ಉದ್ದೇಶವಿದೆಯೇ ಎಂಬ ಬಗ್ಗೆ ಎಫ್ಎಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಇದೀಗ ‘ನೋಟಂ’ ವ್ಯವಸ್ಥೆ ಸರಿಯಾಗಿದ್ದು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನದಲ್ಲಿ ಇಂತಹ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗುವುದು ಎಂದು ವರದಿ ಹೇಳಿದೆ.





