ಉಕ್ರೇನ್ ನೇಟೊ ಒಕ್ಕೂಟದ ವಾಸ್ತವಿಕ ಸದಸ್ಯ: ರಕ್ಷಣಾ ಸಚಿವ ರೆಝಿಂಕೋವ್

ಕೀವ್, ಜ.13: ಉಕ್ರೇನ್ ನೇಟೊ ಒಕ್ಕೂಟದ ವಾಸ್ತವಿಕ ಸದಸ್ಯನಾಗಿರುವುದರಿಂದ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ಗೆ ಟ್ಯಾಂಕ್ಗಳು, ಫೈಟರ್ ಜೆಟ್ನಂತಹ ಘನ ಶಸ್ತ್ರಾಸ್ತ್ರಗಳನ್ನು ಒದಗಿಸುವ ವಾಗ್ದಾನವನ್ನು ಈಡೇರಿಸುವ ವಿಶ್ವಾಸವಿದೆ ಎಂದು ಉಕ್ರೇನ್ನ ರಕ್ಷಣಾ ಸಚಿವ ಒಲೆಕ್ಸಿ ರೆಝಿಂಕೋವ್ ಹೇಳಿದ್ದಾರೆ.
ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧದಲ್ಲಿ ತಮ್ಮ ಮಿತ್ರದೇಶ ಉಕ್ರೇನ್ನ ಪರವಾಗಿ ನೇರವಾಗಿ ಪಾಲ್ಗೊಳ್ಳುವುದಕ್ಕೆ ಪಾಶ್ಚಿಮಾತ್ಯ ದೇಶಗಳು ಹಾಗೂ ನೇಟೊ ಒಕ್ಕೂಟ ಹಿಂಜರಿಯುತ್ತಿರುವ ಕುರಿತ ಪ್ರಶ್ನೆಗೆ ‘ ಹೀಗೆ ಮಾಡುವುದರಿಂದ ರಶ್ಯವನ್ನು ಪ್ರಚೋದಿಸಿದಂತಾಗುತ್ತದೆ ಎಂಬ ಭಾವನೆ ತನ್ನ ಪ್ರಕಾರ ಒಂದು ರೀತಿಯ ಶಿಷ್ಟಾಚಾರ ಆಗಿದೆ ಅಷ್ಟೇ’ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ರೆಝಿಂಕೋವ್ ಉತ್ತರಿಸಿದರು.
ಉಕ್ರೇನ್ ಒಂದು ದೇಶ ಮತ್ತು ಉಕ್ರೇನ್ನ ಸಶಸ್ತ್ರ ಪಡೆಗಳು ನೇಟೊದ ಸದಸ್ಯನಾಗಿದೆ. ವಾಸ್ತವವಾಗಿ, ಕಾನೂನಿನ ಪ್ರಕಾರ ಅಲ್ಲ, ಉಕ್ರೇನ್ ನೇಟೊದ ಸದಸ್ಯ. ಯಾಕೆಂದರೆ ನಮ್ಮ ಬಳಿ ಆಯುಧಗಳಿವೆ, ಅವನ್ನು ಬಳಸುವ ಮಾಹಿತಿಯಿದೆ ಎಂದ ಅವರು, ನೇಟೊಗೆ ಸೇರ್ಪಡೆಗೊಳ್ಳುವ ಉಕ್ರೇನ್ನ ದೀರ್ಘಾವಧಿಯ ಮಹಾತ್ವಾಕಾಂಕ್ಷೆ ಈಡೇರುವಲ್ಲಿ ಯಾವುದೇ ವಿವಾದ ಇರಬಾರದು. ಸಧ್ಯದಲ್ಲೇ ನಾವು ನೇಟೊದ ಕಾನೂನುಬದ್ಧ ಸದಸ್ಯರಾಗುವ ಬಗ್ಗೆ ತನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
ನೇಟೊ ಒಕ್ಕೂಟದ ಅಧಿಕೃತ ಸದಸ್ಯತ್ವ ಪಡೆದರೆ ಮಾತ್ರ ಉಕ್ರೇನ್ ನೆರವಿಗೆ ನೇಟೊ ಧಾವಿಸಬಹುದು. ಉಕ್ರೇನ್ ಇನ್ನೂ ನೇಟೊ ಸದಸ್ಯತ್ವ ಪಡೆದಿಲ್ಲದ ಕಾರಣ, ಒಂದು ವೇಳೆ ನೇಟೊ ಒಕ್ಕೂಟದ ಸೇನೆ ಉಕ್ರೇನ್ ನೆರವಿಗೆ ಬಂದರೆ ಅದು ಪರಮಾಣು ಯುದ್ಧಕ್ಕೆ ನಾಂದಿ ಹಾಡಬಹುದು ಎಂದು ರಶ್ಯ ಎಚ್ಚರಿಸಿದೆ.
ರಶ್ಯದ ಆಕ್ರಮಣವನ್ನು ಎದುರಿಸಲು ಅಮೆರಿಕ ಹಾಗೂ ಅದರ ಮಿತ್ರದೇಶಗಳು ಉಕ್ರೇನ್ಗೆ ಯುದ್ಧವಾಹನ ಮತ್ತು ರಾಕೆಟ್ಗಳನ್ನು ಒದಗಿಸಿವೆ. ಆದರೆ ಇದುವರೆಗೆ ದೀರ್ಘಶ್ರೇಣಿಯ ಕ್ಷಿಪಣಿ ಹಾಗೂ ಘನಟ್ಯಾಂಕ್ಗಳನ್ನು ಒದಗಿಸುವುದನ್ನು ತಡೆಹಿಡಿದಿವೆ.
ಈ ಮಧ್ಯೆ, ಉಕ್ರೇನ್ಗೆ ಭಾರೀ ಯುದ್ಧ ಟ್ಯಾಂಕ್ಗಳನ್ನು ಒದಗಿಸಲು ಬ್ರಿಟನ್ ಹಿಂಜರಿಯಬಾರದು. ಈ ಬೆಂಕಿಯನ್ನು (ಉಕ್ರೇನ್ ಯುದ್ಧ) ನಂದಿಸಲು ನಾವು ಇನ್ನಷ್ಟು ಕ್ರಮ ಕೈಗೊಳ್ಳಬಹುದಿತ್ತು. ಆದರೆ ನಾವು ಸುಮ್ಮನಿದ್ದೆವು’ ಎಂದು ಬ್ರಿಟನ್ ಸಂಸತ್ತಿನ ರಕ್ಷಣಾ ಸ್ಥಾಯಿಸಮಿತಿಯ ಅಧ್ಯಕ್ಷ ಟೊಬಿಯಸ್ ಎಲ್ವುಡ್ ಹೇಳಿದ್ದಾರೆ.