ಎಣ್ಣೆ ಕಾಳುಬೆಳೆಗಳ ವ್ಯಾಪ್ತಿಗೆ ತೆಂಗು ಬೆಳೆ: ಶೋಭಾ ಕರಂದ್ಲಾಜೆ
ಕುಂದಾಪುರ: ತೆಂಗು ಬೆಳೆಯನ್ನು ರೈತರ ಕೋರಿಕೆಯಂತೆ ಎಣ್ಣೆ ಕಾಳು ಬೆಳೆಗಳ ವ್ಯಾಪ್ತಿಗೆ ತರಲಾಗಿದೆ.ನಮ್ಮ ದೇಶಕ್ಕೆ ಬೇಕಾಗಿರುವ ಶೇ.70ರಷ್ಟು ಖಾದ್ಯ ತೈಲ ಹೊರ ದೇಶಗಳಿಂದ ಪೂರೈಕೆಯಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನ, ಎಣ್ಣೆ ಕಾಳು ಉತ್ಪನ್ನ, ಖಾದ್ಯ ತೈಲ ಹಾಗೂ ರಸಗೊಬ್ಬರಗಳಲ್ಲಿ ಆತ್ಮನಿರ್ಭರ ಇಲ್ಲ ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕುಂದಾಪುರ ಸಮೀಪದ ತಲ್ಲೂರಿನಲ್ಲಿ ಗುರುವಾರ ನಡೆದ ತೆಂಗು ಅಭಿವೃದ್ಧಿ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಹಾಗೂ ರೈತರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದೇಶಾದ್ಯಂತ ಎಣ್ಣೆ ಕಾಳುಗಳ ಬೆಳೆ ಇಳಿಮುಖವಾಗುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ 13.3 ಲಕ್ಷ ಎಕ್ರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಎಣ್ಣೆ ಕಾಳುಗಳ ಬೆಳೆ ಇದೀಗ 3 ಲಕ್ಷ ಎಕ್ರೆಗೆ ಇಳಿಕೆಯಾಗಿದೆ. 1.5 ಲಕ್ಷ ಕೋಟಿ ರೂ. ಮೌಲ್ಯದ ಪಾಮೋಲಿನ್ ಎಣ್ಣೆಯನ್ನು ಇಂಡೋನೇಷಿಯಾ ಹಾಗೂ ಮಲೇಷ್ಯಾ ದೇಶದಿಂದ ಅಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ಬೇರೆ ತೈಲೋತ್ಪನ್ನಗಳಲ್ಲಿ ಬಳಕೆಯಾಗುತ್ತಿರುವ ಪಾಮೋಲಿನ್ ಬಳಕೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣದಿಂದ ಕೇಂದ್ರ ಸರ್ಕಾರ ಎಣ್ಣೆ ಕಾಳುಗಳ ಬೆಳೆಗೆ ಆದ್ಯತೆ ನೀಡುತ್ತಿದೆ ಎಂದರು.
ಈ ಭಾಗದಲ್ಲಿ ಬೆಳೆಗೆ ಅವಕಾಶವಿರುವ ತೆಂಗು ಹಾಗೂ ತಾಳೆ ಬೆಳೆಗೆ ಆದ್ಯತೆ ನೀಡಲಾಗುವುದು. ತೆಂಗಿನ ಎಣ್ಣೆ ಬಳಕೆ ಹೆಚ್ಚಾಗುವ ಕುರಿತು ಅದರಲ್ಲಿನ ಗುಣಾತ್ಮಕ ಅಂಶಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಪ್ರಚಾರ ಮಾಡುವ ಕುರಿತು ಕಾರ್ಯಕ್ರಮಗಳು ನಡೆಯಬೇಕು. ಇದರಲ್ಲಿ ಒಳ್ಳೆಯ ಅಂಶಗಳ ಹಾಗೂ ಲಾಭದಾಯಕ ಮಾರಕಟ್ಟೆಯ ಬಗ್ಗೆಯೂ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳು ಆಗಬೇಕು. ಭಾರತ ಖಾದ್ಯ ತೈಲದಲ್ಲಿ ಸ್ವಾವಲಂಬಿಯಾಗುವ ಕುರಿತು ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಎಂದು ಸಚಿವೆ ಶೋಭಾ ನುಡಿದರು.
ಕೇಂದ್ರ ಸರ್ಕಾರದ ಮುಂದೆ ಸುಮಾರು 250 ವಿವಿಧ ಬಗೆಯ ಅಕ್ಕಿಗಳ ಬಳಕೆಯ ಬಗ್ಗೆ ಪ್ರಸ್ತಾವನೆ ಇದೆ. ಮಾನದಂಡ ಹಾಗೂ ನಿಬಂಧನೆ ಆಧಾರ ದಲ್ಲಿ ಕೇಂದ್ರ ಸರ್ಕಾರ ಅಕ್ಕಿಗಳ ಬಳಕೆಗೆ ಕ್ರಮ ಕೈಗೊಳ್ಳುತ್ತಿದೆ. ಕರ್ನಾಟಕ ಕರಾವಳಿ ಭಾಗದಲ್ಲಿ ಬೇಡಿಕೆ ಇರುವ ಕುಚ್ಚಲಕ್ಕಿಯನ್ನು ಪಡಿತರವಾಗಿ ನೀಡಲು ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದು, ರಾಜ್ಯ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಕ್ರಮ ಕೈಗೊಳ್ಳದೆ ಇದ್ದಲ್ಲಿ, ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ ಉಪಸ್ಥಿತರಿದ್ದರು.