ದಕ್ಷಿಣ ಅಮೆರಿಕದಲ್ಲಿ ಸುಂಟರಗಾಳಿಯ ಅಬ್ಬರ; 7 ಮಂದಿ ಮೃತ್ಯು

ವಾಷಿಂಗ್ಟನ್, ಜ.13: ದಕ್ಷಿಣ ಅಮೆರಿಕಾದಲ್ಲಿ ಚಂಡಮಾರುತದ ರೂಪು ಪಡೆಯುವ ಸಾಧ್ಯತೆಯಿರುವ ತೀವ್ರ ಸುಂಟರಗಾಳಿಯ ಅಬ್ಬರದಿಂದ ವ್ಯಾಪಕ ನಾಶ ಮತ್ತು ನಷ್ಟವಾಗಿದ್ದು ಜಾರ್ಜಿಯಾ ಮತ್ತು ಅಲಬಾಮಾ ನಗರಗಳಲ್ಲಿ ಕನಿಷ್ಟ 7 ಮಂದಿ ಮೃತಪಟ್ಟಿದ್ದಾರೆ. ಐತಿಹಾಸಿಕ ನಗರ ಸೆಲ್ಮಾದಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ರಸ್ತೆಯಲ್ಲಿ ನಿಲ್ಲಿಸಿದ ಕಾರುಗಳು ಉರುಳಿಬಿದ್ದಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ರಾತ್ರಿಯಿಂದ ಸುಂಟರಗಾಳಿಯ ಪ್ರಕೋಪ ತಗ್ಗಿದ್ದರೂ ಜಾರ್ಜಿಯಾ ಮತ್ತು ಅಲಬಾಮಾ ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಸಾವಿರಾರು ಮಂದಿ ತೊಂದರೆಗೆ ಒಳಗಾಗಿದ್ದಾರೆ.
ಸುಂಟರಗಾಳಿಯಿಂದ ಆಗಿರುವ ನಾಶನಷ್ಟದ ಪ್ರಮಾಣದ ಬಗ್ಗೆ ಇನ್ನಷ್ಟೇ ಸ್ಪಷ್ಟಚಿತ್ರಣ ದೊರಕಬೇಕಿದೆ. ನಾಗರಿಕ ಹಕ್ಕುಗಳ ಚಳವಳಿಯ ಇತಿಹಾಸ ಹೊಂದಿರುವ ಸೆಲ್ಮಾ ನಗರದಲ್ಲಿ ವಿದ್ಯುತ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮೊಬೈಲ್ಫೋನ್ಗಳ ಬೆಳಕಿನಲ್ಲಿ ಸಭೆ ನಡೆಸಿದ ನಗರಸಮಿತಿಯ ಅಧಿಕಾರಿಗಳು ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಈ ಪ್ರದೇಶದಲ್ಲಿ ಸುಂಟರಗಾಳಿಯ ಹೊಡೆತಕ್ಕೆ ಭೂಮಿ ಬಿರುಕುಬಿಟ್ಟಿದ್ದು ಹಲವು ಮರಗಳು ಉರುಳಿ ಬಿದ್ದಿವೆ. ಮನೆಗಳ ಗೋಡೆ ಶಿಥಿಲಗೊಂಡಿವೆ. ಹಲವು ಮಂದಿ ಗಾಯಗೊಂಡಿದ್ದು ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದ ಬಳಿಕ ನಾಶ ನಷ್ಟದ ಮಾಹಿತಿ ದೊರಕಲಿದೆ ಎಂದು ಸೆಲ್ಮಾ ನಗರದ ಮೇಯರ್ ಜೇಮ್ಸ್ ಪರ್ಕಿನ್ಸ್ ಹೇಳಿದ್ದಾರೆ.
ಅಲಾಬಾಮದ ಅಟೌಗಾ ಕೌಂಟಿಯಲ್ಲಿ 6 ಮಂದಿ ಸಾವನ್ನಪ್ಪಿದ್ದರೆ ಸುಮಾರು 40 ಮನೆಗಳಿಗೆ ಹಾನಿಯಾಗಿದೆ. ಕನಿಷ್ಟ 12 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಲ್ಲಿ ಉರುಳಿಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ಗಾಯಾಳುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಕೌಂಟಿಯ ತುರ್ತು ನಿರ್ವಹಣಾ ಪಡೆಯ ನಿರ್ದೇಶಕ ಎರ್ನೀ ಬ್ಯಾಗೆಟ್ ಹೇಳಿದ್ದಾರೆ.
ಜಾರ್ಜಿಯಾದ ಜಾಕ್ಸನ್ ಪ್ರದೇಶದಲ್ಲಿ ರಸ್ತೆ ಮೇಲೆ ಸಾಗುತ್ತಿದ್ದ ವಾಹನದ ಮೇಲೆ ಮರ ಉರುಳಿ ಬಿದ್ದು ವಾಹನದಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾನೆ. ಸುಂಟರಗಾಳಿಯ ಹೊಡೆತಕ್ಕೆ ಸಿಲುಕಿದ ಗೂಡ್ಸ್ ರೈಲೊಂದು ಹಳಿತಪ್ಪಿದೆ. ಅಟ್ಲಾಂಟಾದ ದಕ್ಷಿಣದಲ್ಲಿರುವ ಗ್ರಿಫಿತ್ನಲ್ಲಿ ಮರಗಳು ಅಪಾರ್ಟ್ಮೆಂಟ್ ಮೇಲೆ ಉರುಳಿಬಿದ್ದು ಹಲವರು ಅದರಡಿ ಸಿಲುಕಿದ್ದಾರೆ. ಇದೇ ನಗರದ ಮಾಲ್ ಒಂದರ ಛಾವಣಿ ಹಾರಿಹೋಗಿದೆ. ನಗರದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ತನಕ ಕರ್ಫ್ಯೂ ವಿಧಿಸಲಾಗಿತ್ತು ಎಂದು ವರದಿಯಾಗಿದೆ.







