ಮಾರ್ಚ್ನಲ್ಲಿ ಹೊಸ ವೇತನ ಆಯೋಗ ಜಾರಿ: ಷಡಕ್ಷರಿ
ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ
ಜಿಲ್ಲೆಯ ನೌಕರರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ: ರಘುಪತಿ ಭಟ್
ಉಡುಪಿ: ನೌಕರರು ಕರ್ತವ್ಯದ ಅವಧಿಯಲ್ಲಿ ಮರಣ ಹೊಂದಿದರೆ 1 ಕೋಟಿ ರೂ. ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮನೆ ಮತ್ತು ವಿದ್ಯಾಭ್ಯಾಸ ಸಾಲದಲ್ಲಿ ರಿಯಾಯತಿ ನೀಡುವ ಬಗ್ಗೆ ಸರಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಮಾರ್ಚ್ನಲ್ಲಿ ಹೊಸ ವೇತನ ಆಯೋಗ ಜಾರಿಗೆ ಬಂದ ನಂತರ ಎನ್ಪಿಎಸ್ ನೌಕರರಿಗೆ ಹಳೆಪಿಂಚಣಿ ವ್ಯವಸ್ಥೆ ಜಾರಿಗೆ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ.
ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಇಂದು ನಡೆದ, ಜಿಲ್ಲಾ ಸರಕಾರಿ ನೌಕರರ ಸಂಘದ 2022ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಸಂಘದ ವತಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿವರ್ಷ 10000 ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣವಾಗುವ ಅವಧಿಯನ್ನು 2023ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೆಜಿಐಡಿಯಲ್ಲಿ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ರಾಜ್ಯದ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯ ಸರಕಾರಿ ನೌಕರರು, ಸರಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ರೀತಿಯ ಸೇವೆ ನೀಡುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ 7500ಕ್ಕೂ ಅಧಿಕ ಸರಕಾರಿ ನೌಕರರಿದ್ದು, ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ನೀಡುವಲ್ಲಿ ಸರ್ಕಾರದ ಮಟ್ಟದಲ್ಲಿ ವಿಶೇಷವಾಗಿ ಪ್ರಯತ್ನಿಸುವುದಾಗಿ ತಿಳಿಸಿದ ಶಾಸಕರು, ಸರಕಾರಿ ನೌಕರರ ಪ್ರತಿಭಾವಂತ ಮಕ್ಕಳು ಅಖಿಲ ಭಾರತ ಮತ್ತು ಕರ್ನಾಟಕ ಆಡಳಿತ ಸೇವೆಯಲ್ಲಿ ಸೇರ್ಪಡೆಗೊಳ್ಳಬೇಕು. ಈ ಬಗ್ಗೆ ನೌಕರರು ತಮ್ಮ ಮಕ್ಕಳನ್ನು ಪ್ರೇರೇಪಿಸಬೆಕು ಎಂದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮಾತನಾಡಿ, ನೌಕರರು ತಮ್ಮ ಕರ್ತವ್ಯದ ಜೊತೆಗೆ ಮಕ್ಕಳಿಗೆ ಅಗತ್ಯ ಸಮಯ ಮೀಸಲಿಡಬೇಕು. ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಉನ್ನತ ಸಾಧನೆಗಳನ್ನು ಮಾಡುವಂತೆ ಪ್ರೇರೇಪಿಸಬೇಕು ಎಂದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘದ ಉಪಾಧ್ಯಕ್ಷ ಮೋಹನ್ಕುಮಾರ್, ಜಿಲ್ಲಾ ಸಂಘದ ಖಜಾಂಜಿ ಶರೀಫ್ ರೋಣ, ಹೆಬ್ರಿ ತಾಲೂಕು ಸರ್ಕಾರಿ ನೌಕರರ ಸಂಘದ ಆಧ್ಯಕ್ಷ ಹರೀಶ್ ಪೂಜಾರಿ, ಕಾರ್ಕಳದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹಾಗೂ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಪ್ರತಿಭಾವಂತ ಮಕ್ಕಳು ಮತ್ತು ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ವಂದಿಸಿದರು.ದಯಾನಂದ್ ಮತ್ತು ಮಂಜುಳಾ ಜಯಕರ್ ಕಾರ್ಯಕ್ರಮ ನಿರೂಪಿಸಿದರು.