ಕ್ರಿಕೆಟ್ ಟೂರ್ನಿಯಲ್ಲಿ ಔಟಾಗದೆ 508 ರನ್ ಗಳಿಸಿ ದಾಖಲೆ ನಿರ್ಮಿಸಿದ 13ರ ಬಾಲಕ ಯಶ್ ಚಾವ್ಡೆ

ನಾಗ್ಪುರ: ಕೇವಲ ಮೂರು ವರ್ಷಗಳ ಹಿಂದೆ ಸ್ಕೇಟಿಂಗ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯಶ್ ಚಾವ್ಡೆ (Yash Chawde) ಸ್ಕೇಟಿಂಗ್‌ನಲ್ಲಿ ಭವಿಷ್ಯ ಅಸ್ಪಷ್ಟವಾಗಿದ್ದ ಕಾರಣ ತಂದೆ ಶ್ರವಣ್ ಒತ್ತಾಸೆಗೆ ಮಣಿದು ಕ್ರಿಕೆಟ್ ಕಣಕ್ಕೆ ಇಳಿದರು. ಇದೀಗ ಕ್ರಿಕೆಟ್ ಮೈದಾನದಲ್ಲಿ ಅಮೋಘ ಪ್ರದರ್ಶನ ನೀಡಿರುವ ಯಶ್ ತನ್ನ ತಂದೆಗೆ ಹೆಮ್ಮೆ ತಂದಿದ್ದಾರೆ.
ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ಜೂನಿಯರ್ ಅಂತರ್-ಶಾಲಾ(ಅಂಡರ್-14) ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಯಶ್ ಔಟಾಗದೆ 508 ರನ್(178 ಎಸೆತ, 81 ಬೌಂಡರಿ, 18 ಸಿಕ್ಸರ್)ಸಿಡಿಸಿದರು. ಈ ಮೂಲಕ ತನ್ನ ತಂಡ ಸರಸ್ವತಿ ವಿದ್ಯಾಲಯವು 40 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 714 ರನ್ ಗಳಿಸಲು ನೆರವಾಗಿದ್ದಾರೆ. ಬಲಗೈ ಬ್ಯಾಟರ್ ಚಾವ್ಡೆ ದೇಶಾದ್ಯಂತ ನಡೆಯುವ ಅಂತರ್‌ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಸೀಮಿತ ಓವರ್ ಮಾದರಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
ಚಾವ್ಡ್ಡೆ ಅವರ ಆರಂಭಿಕ ಜೊತೆಗಾರ ತಿಲಕ್ ವಾಕೋಡೆ(127 ರನ್, 97 ಎಸೆತ)ಮೊದಲ ವಿಕೆಟಿಗೆ ದಾಖಲೆಯ ಜೊತೆಯಾಟದಲ್ಲಿ ಭಾಗಿಯಾದರು. ಚಾವ್ಡೆ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸರಸ್ವತಿ ವಿದ್ಯಾಲಯ 40 ಓವರ್‌ಗಳಲ್ಲಿ ದಾಖಲೆಯ ಮೊತ್ತ ಗಳಿಸಿತು. ಗೆಲುವಿಗೆ 715 ರನ್ ಗುರಿ ಪಡೆದಿದ್ದ ಸಿದ್ದೇಶ್ವರ ವಿದ್ಯಾಲಯ 5 ಓವರ್‌ಗಳಲ್ಲಿ ಕೇವಲ 9 ರನ್‌ಗೆ ಆಲೌಟಾಗಿದೆ.
13ರ ಹರೆಯದ ಚಾವ್ಡೆ ಶ್ರೀಲಂಕಾದ ಚರಿತ್ ಸೆಲ್ಲೆಪೆರುಮಾ ನಂತರ ಸೀಮಿತ ಓವರ್ ಕ್ರಿಕೆಟ್‌ನಲ್ಲಿ 500ಕ್ಕೂ ಅಧಿಕ ಸ್ಕೋರ್ ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ. ಆಗಸ್ಟ್ 2022ರಲ್ಲಿ ಅಂಡರ್-15 ಅಂತರ್ ಶಾಲಾ ಟೂರ್ನಿಯಲ್ಲಿ ಚರಿತ ಔಟಾಗದೆ 553 ರನ್ ಗಳಿಸಿದ್ದರು.
ಖ್ಯಾತ ಅಂಕಿ-ಅಂಶ ಸಂಗ್ರಹಗಾರ ಮೋಹನ್‌ದಾಸ್ ಮೆನನ್ ಅವರಲ್ಲಿರುವ ದಾಖಲೆಗಳ ಪ್ರಕಾರ ಚಾವ್ಡೆ ಎಲ್ಲ ಮಾದರಿಗಳಲ್ಲಿ ಹಾಗೂ ಎಲ್ಲ ವಯೋಮಿತಿಗಳಲ್ಲಿ 500ಕ್ಕೂ ಅಧಿಕ ಸ್ಕೋರ್ ಗಳಿಸಿದ 10ನೇ ಬ್ಯಾಟರ್. 10 ಬ್ಯಾಟರ್‌ಗಳ ಪೈಕಿ ಐವರು ಭಾರತೀಯರು. ಅವರುಗಳೆಂದರೆ: ಪ್ರಣವ್ ಧನವಾಡೆ(ಔಟಾಗದೆ 1009 ರನ್), ಪ್ರಿಯಾಂಶು ಮೊಲಿಯ(ಔಟಾಗದೆ 556 ರನ್), ಪೃಥ್ವಿ ಶಾ(546 ರನ್), ಡ್ಯಾಡಿ ಹವೆವಾಲಾ(515 ರನ್) ಹಾಗೂ ಯಶ್ ಚಾವ್ಡೆ(ಔಟಾಗದೆ 508 ರನ್).
ಇದನ್ನೂ ಓದಿ: ಟೆಸ್ಟ್ ತಂಡದಲ್ಲಿ ಸರ್ಫರಾಝ್ ಖಾನ್ ಕಡೆಗಣಿಸಿ ಸೂರ್ಯಕುಮಾರ್ ಗೆ ಮಣೆ: ರಣಜಿ ಟ್ರೋಫಿಗೆ ಅವಮಾನ ಎಂದ ನೆಟ್ಟಿಗರು