ಸಿದ್ದರಾಮಯ್ಯ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಎರಡಲ್ಲ, 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ. ರಾಜ್ಯದ ಜನರು ಅವರನ್ನು ಸ್ಪರ್ಧೆ ಮಾಡಿದಲ್ಲೆಲ್ಲ ಸೋಲಿಸುತ್ತಾರೆ. ಇದು ನಿಶ್ಚಿತ ಎಂದು ಶಾಸಕ ಕೆ.ಎಸ್. ಈಶ್ವರಪ್ಪ (K. S. Eshwarappa) ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಅವರದೇ ಪಕ್ಷದವರೇ ಸೋಲಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿ ಅವರು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆದ್ದು ಬರುವುದಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣ. ಇನ್ನೂ ಕೆಲವರ ಸೋಲಿನಲ್ಲೂ ಇವರ ಪಾತ್ರ ಇದೆ. ಆ ಕಾರಣಕ್ಕೆ ಸಿದ್ದರಾಮಯ್ಯ ಬಾದಮಿ ಬಿಟ್ಟು ಹೊರಟಿದ್ದಾರೆ. ಕೋಲಾರದಲ್ಲಿ ಮಾಜಿ ಸಚಿವ ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ಅಲ್ಲಿಯವರು ಮರೆತಿಲ್ಲ. ಈಗಾಗಲೇ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ಜಟಾಪಟಿ ಇದ್ದು ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು ಸಾಧ್ಯವಿಲ್ಲ ಎಂದರು.
'ಸ್ಯಾಂಟ್ರೋ ರವಿ ಒಬ್ಬ ನೀಚ'
ಸ್ಯಾಂಟ್ರೋ ರವಿ ಒಬ್ಬ ನೀಚ. ಹೆಣ್ಣು ಮಕ್ಕಳನ್ನು ಮಾರಾಟ ದಂಧೆ ಮಾಡುತ್ತಿದ್ದ ದುಷ್ಟನನ್ನು ರಾಜ್ಯದಲ್ಲಿ ಹಿಂದೆಂದೂ ನೋಡಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ತನಿಖೆಯಿಂದ ಆತನ ಜತೆ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿ ಯಾರೇ ಇದ್ದರೂ ಹೊರ ಬರುತ್ತದೆ. ಆತನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂಬುದು ಇಡೀ ರಾಜ್ಯದ ಜನರ ಅಪೇಕ್ಷೆಯಾಗಿದೆ ಎಂದರು.
ಕಾಂಗ್ರೆಸ್ ನವರ ಜನಧ್ವನಿ ರಥಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕಾಂಗ್ರೆಸ್ ನವರು ಯಾತ್ರೆ ಎಂಬ ಪದ ಕಲಿತಿದ್ದೇ ಬಿಜೆಪಿಯಿಂದ. ಕಾಂಗ್ರೆಸ್ ನವರಿಗೆ ಯಾತ್ರೆ ಪಾತ್ರೆ ಎಂಬುದು ಗೊತ್ತೇ ಇರಲಿಲ್ಲ. ಈಗ ಬಿಜೆಪಿಯವರನ್ನು ನೋಡಿಕೊಂಡು ನಾನಾ ರೀತಿಯ ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ಮೂಲಕವಾದರೂ ಕಾಂಗ್ರೆಸ್ ನವರು ಒಟ್ಟಿಗೆ ಸೇರುತ್ತಾರೆಯೇ? ನಿಜಕ್ಕೂ ಸೇರುವುದಿಲ್ಲ. ಅಲ್ಲೂ ಕೂಡ ಸಾಕಷ್ಟು ಗುಂಪುಗಳಿವೆ. ಇದು ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿ ಎಂದರು.
ಮೀಸಲಾತಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅದನ್ನು ಬಿಟ್ಟು ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಿದರೆ ಮೀಸಲಾತಿ ದೊರಕುತ್ತದೆ ಎಂದು ಯಾರಾದರೂ ಅಂದುಕೊಂಡರೆ ಹೋರಾಟ ನಡೆಸಿಕೊಳ್ಳಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಹೋರಾಟದಿಂದ ಮೀಸಲಾತಿ ದೊರಕುವುದಾದರೆ ಎಲ್ಲಾ ಸಮಾಜದವರೂ ಹೋರಾಟ ನಡೆಸುತ್ತಾರೆ. ಮೀಸಲಾತಿ ಬೇಕು ಎನ್ನುತ್ತಾರೆ. ನ್ಯಾಯಾಲಯ ನೀಡಿದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು.
ಇದನ್ನೂ ಓದಿ: ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ: ಸಿ.ಪಿ.ಯೋಗೇಶ್ವರ್ ಮಾತನಾಡಿದ್ದೆನ್ನಲಾದ ಆಡಿಯೋ ವೈರಲ್