ಮಣಿಪಾಲ: ಕರಾವಳಿಯ ನಾಲ್ವರು ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನ
ಬ್ಯಾಂಕಿಂಗ್ ಇಂದು ಕ್ರಿಯಾತ್ಮಕ ಮತ್ತು ಸವಾಲು: ಮಹಾಬಲೇಶ್ವರ ಎಂ.ಎಸ್.

ಉಡುಪಿ: ಪ್ರಸಕ್ತ ದಿನದ ಬ್ಯಾಂಕಿಂಗ್ ಅತ್ಯಂತ ಕ್ರಿಯಾತ್ಮಕ ಹಾಗೂ ಸವಾಲಿನದಾಗಿದೆ. ಸದಾ ಬದಲಾಗುತ್ತಿರುವ ಮಾರುಕಟ್ಟೆ ಹಾಗೂ ಗ್ರಾಹಕರ ನಿರೀಕ್ಷೆಗಳಿಗೆ ಬ್ಯಾಂಕುಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಪಂಧಿಸ ಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಮಣಿಪಾಲ ಎಜ್ಯುಕೇಷನ್ ಆ್ಯಂಡ್ ಮೆಡಿಕಲ್ ಗ್ರೂಫ್ ಬೆಂಗಳೂರು, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಮಣಿಪಾಲ ಹಾಗೂ ಡಾ.ಟಿಎಂಎ ಪೈ ಫೌಂಡೇಷನ್ ಮಣಿಪಾಲ ಸಂಯುಕ್ತವಾಗಿ ಪ್ರತಿವರ್ಷ ಕರಾವಳಿಯ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ಹೊಸ ವರ್ಷದ ಪ್ರಶಸ್ತಿ (ನ್ಯೂ ಇಯರ್ ಅವಾರ್ಡ್) ಯನ್ನು ಇನ್ನೂ ಮೂವರು ಸಾಧಕರೊಂದಿಗೆ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ಇಂದು ಸಂಜೆ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಕಂಪ್ಯೂಟರ್ ಬಳಕೆ ಅಪರೂಪವಾಗಿದ್ದ 1999-2000ನೇ ಸಾಲಿನಲ್ಲೇ ಕರ್ನಾಟಕ ಬ್ಯಾಂಕ್ ವ್ಯವಹಾರಕ್ಕೆ ಕಂಪ್ಯೂಟರ್ ಬಳಕೆಯನ್ನು ಅಳವಡಿಸಿ ಕೊಂಡಿತ್ತು. ತಾನು ಎಂಡಿ ಹಾಗೂ ಸಿಇಓ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಬ್ಯಾಂಕಿನ ಡಿಜಟಲೀಕರಣದ ಅಗತ್ಯವನ್ನು ಮನಗಂಡು ಕಾರ್ಯೋನ್ಮುಖನಾಗಿದ್ದು, ಬ್ಯಾಂಕ್ ಇಂದು ‘ಡಿಜಿಟಲ್ ಬ್ಯಾಂಕ್’ ಆಗಿ ಪರಿವರ್ತನೆಯಾಗಿದ್ದು, ಭವಿಷ್ಯದ ಸವಾಲಿಗೆ ಸಿದ್ಧವಾಗಿದೆ ಎಂದರು.
ಬ್ಯಾಂಕ್‌ಗೆ ಶತಮಾನದ ಸಂಭ್ರಮ: ಕರ್ನಾಟಕ ಬ್ಯಾಂಕ್ ಇಂದು ಪಾನ್ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದು, ಭದ್ರ ಬುನಾದಿಯೊಂದಿಗೆ ನಿರಂತರವಾಗಿ ಉತ್ತಮ ಲಾಭವನ್ನು ಗಳಿಸುತ್ತಿದೆ. 2023ರ ಫೆ.18ರಂದು ಕರ್ನಾಟಕ ಬ್ಯಾಂಕ್ ಸ್ಥಾಪನೆಯ ಶತಮಾನಕ್ಕೆ ಕಾಲಿರಿಸಲಿದೆ. ದೇಶಕ್ಕೆ 100 ವರ್ಷಗಳ ಸೇವೆಯ ಸಂಭ್ರಮವನ್ನು ‘ಹೊಸ ಕೆಬಿಎಲ್’ ಮೂಲಕ ಅರ್ಥವತ್ತಾಗಿ ಆಚರಿಸಲು ಬದ್ಧರಾಗಿದ್ದೇವೆ ಎಂದರು.
ಕೃಷಿಯನ್ನು ತಿರಸ್ಕರಿಸಬೇಡಿ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಛಲದ ಕೃಷಿ ಬದುಕಿನ ಸಫಲ ಸಾಧಕ ಕೇಪು ಅಡ್ಯನಡ್ಕದ ಅಮೈ ಮಹಾಲಿಂಗ ನಾಯ್ಕ್, ಕುಡಿಯುವ ಒಂದು ಲೋಟ ನೀರಿಗಾಗಿ 3-4 ಫರ್ಲಾಂಗು ದೂರ ನಡೆಯಬೇಕಿದ್ದ ಪರಿಸ್ಥಿತಿಯನ್ನು ವಿವರಿಸಿ, ವಿವಿಧ ಅನಿವಾರ್ಯ ಕಾರಣಗಳಿಗಾಗಿ ಬೋಳುಗುಡ್ಡೆಯಲ್ಲಿ ನೀರು ಹುಡುಕುವ ಪ್ರಯತ್ನವನ್ನು ಇಳಿ ವಯಸ್ಸಿನಲ್ಲಿ ಪ್ರಾರಂಭಿಸಿದ್ದು, ಆರು ಸುರಂಗಗಳನ್ನು ಕೊರೆದ ಬಳಿಕ ಪ್ರಕೃತಿಯ ಮಡಿಲಲ್ಲಿ ಅಡಗಿರುವ ನೀರಿನ ಸೆಲೆಯನ್ನು ಹುಡುಕಿ ತೆಗೆದಿದ್ದೇನೆ. ಪ್ರಕೃತಿಯು ನನ್ನ ಶ್ರಮಕ್ಕೆ ಒಲಿದು ನೀಡಿರುವ ನೀರಿನ ಉಡುಗೊರೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ನನಗಿದೆ ಎಂದರು.
ಕೃಷಿ ಪ್ರದಾನವಾದ ದೇಶದಲ್ಲಿ ಕೃಷಿಯನ್ನು ತಿರಸ್ಕರಿಸದೇ ಆಸಕ್ತಿಯಿಂದ ತೊಡಗಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಯುವ ಜನಾಂಗಕ್ಕೆ ಕಿವಿ ಮಾತು ಹೇಳಿದ ಮಹಾಲಿಂಗ ನಾಯ್ಕ್, ಕೃಷಿ ಭೂಮಿಯನ್ನು ಉಳುಮೆ ಮಾಡದೇ ಬಂಜರು ಬಿಡುವುದು ಅಪರಾಧ. ಕ್ಷಣಿಕವಾಗಿ ಶ್ರೀಮಂತನಾಗುವ ಕನಸು ಕೃಷಿಯಲ್ಲಿ ಕೈಗೂಡದಿದ್ದರೂ, ಅದರಲ್ಲಿರುವ ತೃಪ್ತಿ, ಜೀವನ ಉಲ್ಲಾಸ, ಆರೋಗ್ಯಕರ ಜೀವನ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂದರು.
ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಆರ್ಥೋಪೆಡಿಕ್ಸ್ ವಿಭಾಗದ ಪ್ರೊಪೆಸರ್ ಹಾಗೂ ಮಾಜಿ ಡೀನ್ ಡಾ.ಪಿ.ಶ್ರೀಪತಿ ರಾವ್ ಮತ್ತು ಮಣಿಪಾಲ ಮಾಹೆಯ ಮಾಜಿ ವಿದ್ಯಾರ್ಥಿ ವ್ಯವಹಾರ ನಿರ್ದೇಶಕಿ ಹಾಗೂ ಪಿಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪರಿ ಡಾ.ಪುಷ್ಪಾ ಜಿ.ಕಿಣಿ ಸಹ ಈ ಬಾರಿ ಹೊಸ ವರ್ಷದ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂಇಎಂಜಿ ಚಯರ್‌ಮೆನ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ರಂಜನ್ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು.ಪೈ, ಮಣಿಪಾಲ ಡಾ.ಟಿಎಂಎ ಪೈ ಫೌಂಡೇಷನ್‌ನ ಅಧ್ಯಕ್ಷ ಟಿ.ಅಶೋಕ ಪೈ, ಮಾಹೆಯ ಟ್ರಸ್ಟಿ ವಸಂತಿ ಆರ್. ಪೈ ಉಪಸ್ಥಿತರಿದ್ದರು.
ಮಾಹೆಯ ಪ್ರೊ ಚಾನ್ಸಲರ್ ಹಾಗೂ ಅಕಾಡೆಮಿಯ ಅಧ್ಯಕ್ಷ ಡಾ.ಎಚ್. ಎಸ್.ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು. ಮಾಹೆ ಪ್ರೊವೈಸ್ ಚಾನ್ಸಲರ್ ಡಾ.ಶರತ್ ಕೆ.ರಾವ್ ಅಭಿನಂದನಾ ಭಾಷಣ ಮಾಡಿದರು.ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಮಣಿ ಶೆಟ್ಟಿ ವಂದಿಸಿದರೆ, ಪ್ರಿನ್ಸಿಯಾ ನಿಖಿತಾ ಡಯಾಸ್ ಕಾರ್ಯಕ್ರಮ ನಿರೂಪಿಸಿದರು.