ಇಸ್ರೇಲ್ ಗುಂಡಿನ ದಾಳಿ: ಇಬ್ಬರು ಫೆಲೆಸ್ತೀನಿಯರ ಹತ್ಯೆ

ಜೆರುಸಲೇಂ, ಜ.14: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಶನಿವಾರ ಇಸ್ರೇಲ್ ಪಡೆಗಳ ಗುಂಡಿನ ದಾಳಿಯಲ್ಲಿ ಇಬ್ಬರು ಫೆಲೆಸ್ತೀನ್ ಬಂದೂಕುಧಾರಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮದಂಡೆಯ ಜೆನಿನ್ ಮತ್ತು ಅದರ ಸುತ್ತಮುತ್ತಲಿನ ನಗರಗಳಲ್ಲಿ ಇಸ್ರೇಲ್ ಪಡೆ ನಡೆಸುತ್ತಿರುವ ಶೋಧ ಕಾರ್ಯಾಚರಣೆಯ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಫೆಲೆಸ್ತೀನಿಯರು ಹತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ತಡರಾತ್ರಿ ಇಬ್ಬರು ಬಂದೂಕುಧಾರಿಗಳೊಂದಿಗೆ ಇಸ್ರೇಲ್ ಪಡೆ ನಡೆಸಿದ ಗುಂಡಿನ ಘರ್ಷಣೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.
ಗಾಯಗೊಂಡವನನ್ನು ಕಾರಿನಲ್ಲಿ ಕೂರಿಸಿಕೊಂಡು ಮತ್ತೊಬ್ಬ ಅಲ್ಲಿಂದ ಪರಾರಿಯಾಗಿದ್ದು ಆತನನ್ನು ಬೆನ್ನಟ್ಟಿದ ಇಸ್ರೇಲ್ ಪಡೆ ಇಬ್ಬರನ್ನೂ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕಾರಿನಲ್ಲಿದ್ದವರು ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ ಇಸ್ರೇಲಿ ಪಡೆ ಗುಂಡು ಹಾರಿಸಿದೆ. ಇಸ್ರೇಲ್ ಸೇನೆಯಲ್ಲಿ ಯಾವುದೇ ಸಾವು ನೋವಿನ ಪ್ರಕರಣ ವರದಿಯಾಗಿಲ್ಲ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.





