ಇರಾನ್: ಬ್ರಿಟಿಷ್-ಇರಾನಿ ಪ್ರಜೆಗೆ ಮರಣದಂಡನೆ

ಟೆಹ್ರಾನ್, ಜ.14: ಬ್ರಿಟನ್ ಗುಪ್ತಚರ ಇಲಾಖೆಯ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಬ್ರಿಟನ್- ಇರಾನಿ ಪ್ರಜೆ ಅಲಿರೆಝಾ ಅಕ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಇರಾನ್‌ನ ನ್ಯಾಯಾಂಗ ವಿಭಾಗ ವರದಿ ಮಾಡಿದೆ.
ಅವಳಿ ಪೌರತ್ವ ಹೊಂದಿರುವ ಅಕ್ಬರಿಗೆ ‘ಭ್ರಷ್ಟಾಚಾರದಲ್ಲಿ ತೊಡಗಿರುವುದು ಮತ್ತು ರಹಸ್ಯ ಮಾಹಿತಿಯನ್ನು ರವಾನಿಸುವ ಮೂಲಕ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಹಾನಿ ಎಸಗಿದ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಬ್ರಿಟನ್ ಬೇಹುಗಾರಿಕೆ ವಿಭಾಗದ ಕ್ರಮಗಳು ಅಪರಾಧಿಯ ಮಹತ್ವ, ಆತ ಒದಗಿಸಿರುವ ಮಾಹಿತಿಯ ಮಹತ್ವ ಹಾಗೂ ಶತ್ರುಗಳು(ಬ್ರಿಟನ್) ಆತನ ಮೇಲಿಟ್ಟಿದ್ದ ವಿಶ್ವಾಸವನ್ನು ತೋರಿಸುತ್ತದೆ’ ಎಂದು ನ್ಯಾಯಾಂಗ ವಿಭಾಗದ ‘ಮಿಝಾನ್’ ಆನ್‌ಲೈನ್ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ. ಬ್ರಿಟಿಷ್-ಇರಾನಿ ಪ್ರಜೆ ಅಕ್ಬರಿಯ ವಿರುದ್ಧದ ಕಾನೂನುಕ್ರಮವು ಅನಾಗರಿಕ ಕೃತ್ಯವಾಗಿದೆ ಮತ್ತು ಇದಕ್ಕೆ ಶಿಕ್ಷಿಸದೆ ಬಿಡುವುದಿಲ್ಲ ಎಂದು ಬ್ರಿಟನ್ ಪ್ರತಿಕ್ರಿಯಿಸಿದೆ.
‘ಇರಾನ್‌ನಲ್ಲಿ ಬ್ರಿಟನ್-ಇರಾನಿ ಪ್ರಜೆ ಅಕ್ಬರಿಯ ಮರಣದಂಡನೆಯಿಂದ ದಿಗ್ಭ್ರಮೆಗೊಂಡಿದ್ದೇನೆ. ಇದು ಕಠೋರ ಮತ್ತು ಹೇಡಿತನದ ಕೃತ್ಯವಾಗಿದ್ದು ತಮ್ಮ ಸ್ವಂತ ಜನರ ಮಾನವ ಹಕ್ಕುಗಳನ್ನು ಗೌರವಿಸದ ಆಡಳಿತದಿಂದ ನಡೆಸಲ್ಪಟ್ಟಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಟ್ವೀಟ್ ಮಾಡಿದ್ದು, ಈ ರಾಜಕೀಯ ಪ್ರೇರಿತ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
1980ರಿಂದ 1988ರ ವರೆಗೆ ನಡೆದಿದ್ದ ಇರಾನ್-ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಅಕ್ಬರಿಯನ್ನು 2019ರ ಮಾರ್ಚ್‌ನಿಂದ 2020ರ ಮಾರ್ಚ್ ನಡುವಿನ ಅವಧಿಯಲ್ಲಿ ಬಂಧಿಸಲಾಗಿದ್ದು ಇವರು ಬ್ರಿಟನ್‌ನ ಗುಪ್ತಚರ ವಿಭಾಗದ ಪ್ರಮುಖ ಗುಪ್ತಚರನಾಗಿ ಕೆಲಸ ಮಾಡುತ್ತಿದ್ದರು ಎಂದು ಇರಾನ್‌ನ ಗುಪ್ತಚರ ಇಲಾಖೆಯ ಹೇಳಿಕೆ ತಿಳಿಸಿದೆ.