ಸಾವರ್ಕರ್ ದ್ವಿರಾಷ್ಟ್ರ ನೀತಿಯ ಪರವಾಗಿದ್ದರು: ಸುಧೀಂದ್ರ ಕುಲಕರ್ಣಿ
ಎಂ.ಜಿ ಹೆಗಡೆಯವರ "ಮಿನುಗು ನೋಟ" ಕೃತಿ ಬಿಡುಗಡೆ

ಮಂಗಳೂರು, ಜ.15: ವಿನಾಯಕ್ ದಾಮೋದರ ಸಾವರ್ಕರ್ ದ್ವಿರಾಷ್ಟ್ರ ನೀತಿ ಪರವಾಗಿದ್ದರು ಎಂದು ಖ್ಯಾತ ಅಂಕಣಕಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.
ಕದ್ರಿಯ ಲಯನ್ಸ್ ಭವನದಲ್ಲಿ ರವಿವಾರ ಗಾಂಧಿ ವಿಚಾರ ವೇದಿಕೆಯ ಆಶ್ರಯದಲ್ಲಿ ಎಂ.ಜಿ ಹೆಗಡೆಯವರ "ಮಿನುಗು ನೋಟ"(ಗಾಂಧೀಜಿಯವರ ಕುರಿತು ಪ್ರಶ್ನೆಗಳಿಗೆ ಉತ್ತರ) ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ದೇಶ ವಿಭಜನೆಗೆ ಕಾರಣರಾಗಿದ್ದಾರು ಹಾಗೂ ಅವರೊಬ್ಬ ಹಿಂದೂ ವಿರೋಧಿ ಎಂಬ ಭಾವನೆಯನ್ನು ವ್ಯಕ್ತಪಡಿಸುವವರೇ ದ್ವಿರಾಷ್ಟ್ರ ಪರವಾಗಿದ್ದ ಸಾವರ್ಕರನ್ನು ದೇಶ ಭಕ್ತ ಎಂದು ಹೊಗಳುತ್ತಾರೆ. ದೇಶ ವಿಭಜನೆಗೆ ಕಾರಣ ಮಹಾತ್ಮ ಗಾಂಧಿ ಅಲ್ಲ. ಬ್ರಿಟಿಷರು ಮತ್ತು ಮುಸ್ಲಿಮ್ ಲೀಗ್ ಎಂದರು.
ಆರೆಸ್ಸೆಸ್‌ನ ಸರ ಸಂಘಸಂಚಾಲಕ ಮೋಹನ್ ಭಾಗವತ್ ಮಹಾತ್ಮ ಗಾಂಧಿ ಅವರನ್ನು ಹೊಗಳುತ್ತಾರೆ. ಆದರೆ ಅವರ ಸ್ವಯಂ ಸೇವಕರು ಗಾಂಧೀಜಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಾಗಿದ್ದರೆ ನಿಮ್ಮ ಪ್ರಾಮಾಣಿಕ ನಿಲುವು ಏನು? ಮೋಹನ್ ಭಾಗವತ್ ಪ್ರಾಮಾಣಿಕರೇ ಆಗಿದ್ದರೆ ಗಾಂಧೀಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ನಿಲ್ಲಿಸಿ ಅಂತ ಕಾರ್ಯಕರ್ತರಿಗೆ ಕಿವಿಮಾತು ಹೇಳಲಿ ಎಂದು ಸಲಹೆ ನೀಡಿದರು.
ದೇಶದಲ್ಲಿ ಗಾಂಧಿ ಬಗ್ಗೆ ಅಪಪ್ರಚಾರ ಹೇಗೆ ನಡೆಯುತ್ತದೊ ಅದೇ ರೀತಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಬಗ್ಗೆಯೂ ಇಲ್ಲ ಸಲ್ಲದ ಅಪಪ್ರಚಾರ ನಡೆಯುತ್ತಿದ್ದು, ಇದನ್ನೂ ತಡೆಯಬೇಕಾಗಿದೆ. ಮಹಾತ್ಮ ಗಾಂಧಿ ಬಗ್ಗೆ ಅಪಪ್ರಚಾರ ಮಾಡುವವರು ನೆಹರೂ ಅವರನ್ನು ಖಳನಾಯಕನಾಗಿ ಬಿಂಬಿಸಿದ್ದಾರೆ, ನೆಹರೂ ಅವರ ಸೇವೆ, ತ್ಯಾಗ ಸಂಘರ್ಷ ವನ್ನು ಈ ದೇಶ ಯಾವತ್ತೂ ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿರುವ ಕೊಲೆ, ಭ್ರಷ್ಟ, ಒಡೆದಾಳುವ ಹಿಂಸೆಯ ರಾಜಕಾರಣವನ್ನು ತೊಲಗಿಸಬೇಕಾಗಿದೆ. ಕೋಮು ಹಿಂಸೆ ವಿರೋಧಿ ರಾಜಕಾರಣ ನಿಲ್ಲಬೇಕು. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷ ಮುಕ್ತ ಜಿಲ್ಲೆಯಾಗಬೇಕು. ಶಾಂತಿ ನೆಮ್ಮದಿಯ ಜಿಲ್ಲೆಯಾಗಬೇಕು. ಕರ್ನಾಟಕ್ಕೆ ದಕ್ಷಿಣ ಕನ್ನಡ ಹಾಗೂ ದೇಶಕ್ಕೆ ಕರ್ನಾಟಕ ಆದರ್ಶವಾಗಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ಒಂದು ಮಾತು ಹೇಳಿದ್ದರು. ಭಾರತದಿಂದ ಬರುವಾಗ ಗಾಂಧಿ ಮೋಹನ್‌ದಾಸ್ ಕರಮಚಂದ ಗಾಂಧಿ ಆಗಿದ್ದರು. ಆದರೆ ಅವರನ್ನು ಮಹಾತ್ಮ ಗಾಂಧಿಯಾಗಿ ನಾವು ಭಾರತಕ್ಕೆ ವಾಪಸ್ ಕಳುಹಿಸಿದ್ದೆವು ಎನ್ನುವುದು ಇಲ್ಲಿ ಗಮನಾರ್ಹ ಎಂದರು.
ಜಗತ್ತನ್ನು ಮುನ್ನಡೆಸಲು ಶಕ್ತಿ ಸಾಮರ್ಥ್ಯ ಬೇಕು. ಮಹಾತ್ಮ ಗಾಂಧಿ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಭಾರತವನ್ನು ಬದಲಾಯಿಸಲು ಮತ್ತು ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಲು ಸಾಧ್ಯ ಎಂದರು.
ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ್ ಜಿ ಭಿಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬಿ.ಎಂ.ರೋಹಿಣಿ , ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯ ಚಂದ್ರ ಮಾತನಾಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.
ಮಿನುಗು ನೋಟ ಕೃತಿಕಾರ ಎಂ.ಜಿ.ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿದರು.
ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈ ಸ್ವಾಗತಿಸಿದರು. ಲೇಖಕ ಎಂ.ಜಿ.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕಯ ಗೌರವಾಧ್ಯಕ್ಷೆ ಬಿ.ಎಂ.ರೋಹಿಣಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.