ಹೈನುಗಾರರಿಗೆ ಎರಡೂವರೆ ತಿಂಗಳಲ್ಲಿ ಸುಮಾರು 7 ಕೋಟಿ ರೂ. ವಿತರಣೆ: ದ.ಕ ಹಾಲು ಉತ್ಪಾದಕರ ಒಕ್ಕೂಟ

ಮಂಗಳೂರು, ಜ. 15: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವೂ ಹೈನುಗಾರರಿಗೆ ಕಳೆದ ಎರಡೂವರೆ ತಿಂಗಳಿನಿಂದ ನೀಡುತ್ತಿದ್ದ ವಿಶೇಷ ಪ್ರೋತ್ಸಾಹಧನದಲ್ಲಿ ರೂ. 1.05 ಕಡಿತ ಮಾಡುವ ನಿರ್ಧಾರ ಕೈಗೊಂಡಿದೆ.
ಇನ್ನು ಮುಂದೆ 2.5 ರೂ ಬದಲಿಗೆ 1 ರೂಪಾಯಿ ಪ್ರೋತ್ಸಾಹ ಧನ ಹೈನುಗಾರರಿಗೆ ದೊರೆಯಲಿದೆ.
ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಕಳೆದ ಎರಡೂವರೆ ತಿಂಗಳಿನಿಂದ ಪ್ರತಿಲೀಟರ್ ಹಾಲಿಗೆ ರೂ. 2.05 ಪ್ರೋತ್ಸಾಹಧನವನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವೂ ನೀಡುತ್ತಿತ್ತು. ಈಗಾಗಲೇ ಸುಮಾರು 7 ಕೋಟಿ ರೂ.ಗಳನ್ನು ಹೈನುಗಾರ ಸದಸ್ಯರಿಗೆ ವಿತರಿಸಿದ್ದು, ದ.ಕ. ಹಾಲು ಉತ್ಪಾದಕರ ಒಕ್ಕೂಟವು ನಷ್ಟದಿಂದ ಪಾರಾಗಲು ವಿಶೇಷ ಪ್ರೋತ್ಸಾಹ ಧನದಲ್ಲಿ ಕಡಿತ ಮಾಡಿದೆ.
ಪ್ರೋತ್ಸಾಹ ಧನ ನೀಡಲು ಪ್ರಾರಂಭಿಸಿದ ಬಳಿಕ ತೀವ್ರ ದ.ಕ. ಹಾಲು ಒಕ್ಕೂಟವು ಸಂಕಷ್ಟಕ್ಕೆ ಸಿಲುಕಿದೆ. ನಷ್ಟವನ್ನು ಸರಿದೂಗಿಸುವ ಸಲುವಾಗಿ ಹೈನುಗಾರರಿಗೆ ನೀಡಲಾಗುತ್ತಿದ್ದ ವಿಶೇಷ ಬೆಂಬಲ ಬೆಲೆಯಿಂದ 1.05 ರೂ.ಗಳನ್ನು ಹಿಂಪಡೆದಿದೆ.
ಹಿಂದೆ ಒಕ್ಕೂಟವು ಹೈನುಗಾರರಿಗೆ 1 ಲೀಟರ್ ಹಾಲಿಗೆ ಕನಿಷ್ಠ 33. 05 ರೂ. ನೀಡುತ್ತಿತ್ತು. ಇದಕ್ಕೆ ಸರಕಾರದಿಂದ 5 ರೂ. ಬೆಂಬಲ ಬೆಲೆಯೊಂದಿಗೆ 38.05 ರೂ. ಸಿಗುತ್ತಿತ್ತು. ಇದೀಗ 1.05 ರೂ. ಕಡಿತದಿಂದಾಗಿ ಈಗಿನ ಕನಿಷ್ಠ ದರ 32.00 ರೂ. ಆಗಿದೆ. ಸರಕಾರದ 5 ರೂ. ಬೆಂಬಲ ಬೆಲೆಯೊಂದಿಗೆ 37 ರೂ. ಸಿಗಲಿದೆ.
ಹಾಲಿನ ಸಂಗ್ರಹಣೆಯನ್ನು ಹೆಚ್ಚಿಸುವುದರ ಜೊತೆಗೆ ಹಾಲು ಉತ್ಪಾದಕರ ಹಿತವನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಆದರೆ, ಈಗ ಅನಿವಾರ್ಯ ಕಾರಣಗಳಿಂದ ಪ್ರೋತ್ಸಾಹಧನಲ್ಲಿ 1.05 ರೂ. ಕಡಿತ ಮಾಡಿರುವುದಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ ತಿಳಿಸಿದ್ದಾರೆ.
ದ.ಕ ಮತ್ತು ಉಡುಪಿ ಹೊರತಪಡಿಸಿ ಎಲ್ಲಿಯೂ ಹೈನುಗಾರರಿಗೆ ತಮ್ಮ ಒಕ್ಕೂಟದಿಂದ ಪ್ರೋತ್ಸಾಹ ಧನ ನೀಡಲಾಗುತ್ತಿಲ್ಲ. ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟವು ತನ್ನ ಲಾಭದಿಂದ ಹೈನುಗಾರ ಸದಸ್ಯರಿಗೆ ವಿಶೇಷ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ತಿಳಿದು ಬಂದಿದೆ.
ಪ್ರೋತ್ಸಾಹ ಧನ ಜಾರಿಯಾದ ಬಳಿಕ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 32.05 ರೂ. ಸಿಗುತ್ತಿತ್ತು. ಅಲ್ಲದೆ ಸರಕಾರದಿಂದ ಬೆಂಬಲ ಬೆಲೆ 5 ರೂ. ದೊರೆಯುತ್ತಿತ್ತು. ಈ ಹಿಂದೆ ಒಕ್ಕೂಟದಿಂದ ಹೈನುಗಾರರಿಗೆ 2.05 ವಿಶೇಷ ಬೆಂಬಲ ಬೆಲೆ ನೀಡಲಾಗಿತ್ತು. ಈಗ ಕೇವಲ 1 ರೂಪಾಯಿ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 738 ಹಾಲು ಉತ್ಪಾದಕರ ಸಂಘಗಳಿವೆ. ಪ್ರತಿದಿನ 5.70 ಲಕ್ಷ ಲೀಟರ್ ಹಾಲು ಸಂಗ್ರಹಣೆ ಗುರಿ. ಆದರೆ, ಅನಿರೀಕ್ಷಿತ ಮಳೆ, ಜಾನುವಾರುಗಳಲ್ಲಿ ಚರ್ಮ ಗಂಟು ರೋಗ , ಜಾನುವಾರು ಮೇವಿನ ಬೆಲೆ ಏರಿಕೆಯಿಂದ ಹಾಲಿನ ದಾಸ್ತಾನು ಕೊರತೆ ಉಂಟಾಗಿದೆ. ಹಾಲು ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎನ್ನಲಾಗಿದೆ.
ಈಗ ಹಾಲಿನ ಸರಾಸರಿ ಸಂಗ್ರಹ 4.70 ಲಕ್ಷ ಲೀಟರ್ ಆಗಿದೆ. ಅಂದರೆ ನಿತ್ಯ 50,000 ಲೀಟರ್ ಹಾಲಿನ ಕೊರತೆ ಎದುರಿಸುತ್ತಿದೆ. ಬೇರೆ ಜಿಲ್ಲೆಗಳಿಂದ ಹಾಲು ಖರೀದಿಸಿ ಬಳಕೆದಾರರಿಗೆ ನೀಡುವುದು ಸುಲಭವಲ್ಲ. ಪ್ರತಿ ಲೀಟರ್‌ಗೆ 2 ರೂ. ದ.ಕ. ಒಕ್ಕೂಟಕ್ಕೆ ಹೆಚ್ಚುವರಿ 2 ರೂ. ನಷ್ಟ ಅನುಭವಿಸಬೇಕಾಗುತ್ತದೆ.
ಕಳೆದ ಕೋವಿಡ್ ಸಮಯದಲ್ಲಿ ಉಳಿಕೆಯಾಗುತ್ತಿದ್ದ ಹಾಲನ್ನು ಹಾಲಿನ ಪುಡಿ ತಯಾರಿಸಲಾಗುತ್ತಿತ್ತು. ಈಗ ಹಾಲು ಇಲ್ಲ ಈ ಕಾರಣದಿಂದಾಗಿ ಹಾಲಿನ ಪುಡಿ ತಯಾರಿಸಲು ಸಾಧ್ಯವಾಗುತ್ತಿಲ್ಲ. ಹಿಂದೆ ತಯಾರಿಸಿದ್ದ ಹಾಲಿನ ಪುಡಿ ಸಂಪೂರ್ಣ ಖಾಲಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.