ಇಸ್ರೇಲ್: ನೆತನ್ಯಾಹು ಸರಕಾರದ ವಿರುದ್ಧ ಬೃಹತ್ ರ‍್ಯಾಲಿ

ಟೆಲ್ ಅವೀವ್, ಜ.15: ಕಾನೂನು ವ್ಯವಸ್ಥೆಯಲ್ಲಿ ಮಾರ್ಪಾಡು ಮತ್ತು ಸುಪ್ರೀಂಕೋರ್ಟ್ ಅನ್ನು ದುರ್ಬಲಗೊಳಿಸುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಯೋಜನೆಯನ್ನು ವಿರೋಧಿಸಿ ಶನಿವಾರ ಸಾವಿರಾರು ಇಸ್ರೇಲಿಯನ್ನರು ಸೆಂಟ್ರಲ್ ಟೆಲ್ಅವೀವ್ನಲ್ಲಿ ಜಮಾಯಿಸಿ ಬೃಹತ್ ರ್ಯಾಲಿ ನಡೆಸಿ ಪ್ರತಿಭಟಿಸಿದರು ಎಂದು ವರದಿಯಾಗಿದೆ.
ನೆತನ್ಯಾಹು ಸರಕಾರದ ಈ ಕ್ರಮಗಳು, ಅಧಿಕಾರ ವಿಕೇಂದ್ರೀಕರಣದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರೆ ಅಥವಾ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನೆತನ್ಯಾಹು ಮತ್ತು ಅವರ ಸರಕಾರದ ಅತಿರಾಷ್ಟ್ರವಾದಿ ರಾಷ್ಟ್ರೀಯ ಭದ್ರತಾ ಸಚಿವ ಇತಮರ್ ಬೆಂಗ್ವಿರ್ ಪೊಲೀಸರಿಗೆ ನೀಡಿದ ಆದೇಶಕ್ಕೆ ಸವಾಲೆಸೆದು ಬೃಹತ್ ಪ್ರತಿಭಟನಾ ರ್ಯಾಲಿ ನಡೆದಿದೆ. ಟೆಲ್ಅವೀವ್ನ ಹಬೀಮಾ ವೃತ್ತದ ಬಳಿ ನಡೆದ ರ್ಯಾಲಿಯಲ್ಲಿ ಸೇರಿದ್ದ ಕನಿಷ್ಟ 80,000 ಮಂದಿ ಇಸ್ರೇಲ್ನ ಧ್ವಜವನ್ನು ಬೀಸುತ್ತಾ `ಕ್ರಿಮಿನಲ್ ಸರಕಾರ, ಪ್ರಜಾಪ್ರಭುತ್ವದ ಅಂತ್ಯ' ಇತ್ಯಾದಿ ಘೋಷಣೆ ಕೂಗುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅವರು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಸಾಧ್ಯವಾಗದು. ಇಸ್ರೇಲ್ನ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಲು ನಾವು ಅಂತಿಮ ಕ್ಷಣದವರೆಗೂ ಹೋರಾಡುತ್ತೇವೆ ಎಂದು ಪ್ರತಿಭಟನಾಕಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದಕ್ಕೆ ವ್ಯತಿರಿಕ್ತ ವರದಿ ಮಾಡಿರುವ ಇಸ್ರೇಲ್ ಮಾಧ್ಯಮಗಳು
`ಬೆರಳೆಣಿಕೆಯಷ್ಟು ಪ್ರತಿಭಟನಾಕಾರರು ಟೆಲ್ಅವೀವ್ ಹೆದ್ದಾರಿಯನ್ನು ತಡೆಯಲು ಪ್ರಯತ್ನಿಸಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು ಎಂದು ಪ್ರತಿಪಾದಿಸಿವೆ. ಪ್ರತಿಭಟನಾ ರ್ಯಾಲಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನಾಕಾರರೊಂದಿಗೆ ಮೃದುವಾಗಿ ವರ್ತಿಸುವಂತೆ ಮತ್ತು ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ಆದರೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿತ್ತು ಎಂದು ವರದಿ ಹೇಳಿದೆ. ಜೆರುಸಲೇಂ ಮತ್ತು ಹೈಫಾ ನಗರದಲ್ಲೂ ಪ್ರತಿಭಟನೆ ನಡೆದಿದೆ.
ಭ್ರಷ್ಟಾಚಾರ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರಧಾನಿ ನೆತನ್ಯಾಹು, ದೇಶದ ಕಾನೂನುವ್ಯವಸ್ಥೆಯಲ್ಲಿ ಮಾರ್ಪಾಡು ಮಾಡುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಬಲಪಂಥೀಯ ರಾಷ್ಟ್ರೀಯತಾವಾದಿ ಮತ್ತು ಸಂಪ್ರದಾಯವಾದಿ ಪಕ್ಷಗಳ ನೆರವಿನಿಂದ ಮೈತ್ರಿಸರಕಾರ ರಚಿಸಿರುವ ನೆತನ್ಯಾಹು, ಅಧಿಕಾರ ಸ್ವೀಕರಿಸಿದ ಎರಡು ವಾರದಲ್ಲೇ ಸುಪ್ರೀಂಕೋರ್ಟ್ನ ಅಧಿಕಾರ ದುರ್ಬಲಗೊಳಿಸುವ ಯೋಜನೆಯನ್ನು ಪ್ರಸ್ತಾವಿಸಿದ್ದಾರೆ.
ಸುಪ್ರೀಂಕೋರ್ಟ್ನ ಆದೇಶವನ್ನು ಸರಳ ಬಹುಮತದೊಂದಿಗೆ ರದ್ದುಗೊಳಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುವ, ನ್ಯಾಯಾಧೀಶರ ನೇಮಕ ಪ್ರಕ್ರಿಯೆಯ ನಿಯಂತ್ರಣವನ್ನು ಸಂಸತ್ತಿಗೆ ನೀಡುವ, ಕಾನೂನು ಸಲಹೆಗಾರರ ಸ್ವಾತಂತ್ರ್ಯವನ್ನು ಕಡಿಮೆಗೊಳಿಸುವ ಈ ಪ್ರಸ್ತಾವನೆಗೆ ವಿಪಕ್ಷ ಮುಖಂಡರಿಂದ, ಮಾಜಿ ಅಟಾರ್ನಿ ಜನರಲ್ಗಳಿಂದ ಮತ್ತು ಇಸ್ರೇಲ್ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರ ಸಹಿತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಾನೂನಿನಲ್ಲಿ ಮಾರ್ಪಾಡಾದರೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನೆತನ್ಯಾಹುಗೆ ಅನುಕೂಲವಾಗಲಿದೆ.
ಇಸ್ರೇಲ್ ಸೇನೆಯಿಂದ ಫೆಲೆಸ್ತೀನ್ ಪ್ರಜೆಯ ಹತ್ಯೆ
ಆಕ್ರಮಿತ ಪಶ್ಚಿಮದಂಡೆಯ ರಮಲ್ಲಾ ನಗರದ ಬಳಿ ಇಸ್ರೇಲ್ ಸೇನೆ ಫೆಲೆಸ್ತೀನ್ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಫೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ. ರಮಲ್ಲಾದ ಈಶಾನ್ಯದಲ್ಲಿರುವ ಸಿಲ್ವಾದ್ ನಗರದ ಚೆಕ್ಪಾಯಿಂಟ್ ಬಳಿ ಇಸ್ರೇಲ್ ಯೋಧರ ಜತೆ ವಾದ ಮಾಡಿದ ಅಹ್ಮದ್ ಕಹ್ಲಾ ಎಂಬ ವ್ಯಕ್ತಿಯನ್ನು ಕಾರಿನಿಂದ ಇಳಿಯುವಂತೆ ಸೂಚಿಸಿದ ಬಳಿಕ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಫೆಲೆಸ್ತೀನ್ನ `ವಫಾ' ಸುದ್ಧಿಸಂಸ್ಥೆ ವರದಿ ಮಾಡಿದೆ.
ಇದರೊಂದಿಗೆ ಈ ವರ್ಷದ ಆರಂಭದ 15 ದಿನದಲ್ಲೇ ಇಸ್ರೇಲ್ ಸೇನೆಯಿಂದ ಹತರಾದ ಫೆಲೆಸ್ತೀನೀಯರ ಸಂಖ್ಯೆ 13ಕ್ಕೇರಿದೆ. ಚೆಕ್ಪಾಯಿಂಟ್ ಬಳಿ ಅಧಿಕಾರಿಗಳ ಸೂಚನೆ ಧಿಕ್ಕರಿಸಿ ಅಹ್ಮದ್ ಕಹ್ಲಾ ಯೋಧರನ್ನು ಚೂರಿಯಿಂದ ಇರಿಯಲು ಪ್ರಯತ್ನಿಸಿದಾಗ ಇಸ್ರೇಲ್ ಯೋಧರು ಗುಂಡು ಹಾರಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಯೋಧನ ಮೃತ್ಯು
ಈ ಮಧ್ಯೆ, ಆಕ್ರಮಿತ ಪಶ್ಚಿಮ ದಂಡೆಯ ಜೋರ್ಡನ್ ಕಣಿವೆಯಲ್ಲಿರುವ ಸೇನಾ ನೆಲೆಯಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಸ್ರೇಲ್ನ ಓರ್ವ ಯೋಧ ಮೃತಪಟ್ಟಿದ್ದು ಇತರ ಮೂರು ಯೋಧರು ಗಾಯಗೊಂಡಿರುವುದಾಗಿ ಸೇನೆ ಹೇಳಿದೆ.
ಇಸ್ರೇಲ್ ನ ಕೆಫಿರ್ ಬ್ರಿಗೇಡ್ನ ತರಬೇತಿ ಮೈದಾನದ ಬಳಿಯ ಯೋಧರ ವಸತಿ ಗೃಹದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಕಾರಣದ ಬಗ್ಗೆ ಮಿಲಿಟರಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸೇನೆ ಹೇಳಿದೆ.
ಇದನ್ನು ಓದಿ: ವಂಚನೆಗೊಳಗಾಗಿ ಮಿಲಿಯನ್‌ಗಟ್ಟಲೆ ಡಾಲರ್ ಕಳೆದುಕೊಂಡ ಉಸೇನ್ ಬೋಲ್ಟ್: ಜಮೈಕಾ ಮೂಲದ ಕಂಪನಿ ವಿರುದ್ಧ ತನಿಖೆ