ಬಡ ದೇಶಗಳ ಆರೋಗ್ಯ ಕೇಂದ್ರಗಳಿಗೆ ವಿದ್ಯುತ್ ವ್ಯವಸ್ಥೆಯ ಕೊರತೆ: ವರದಿ

ಜಿನೆವಾ, ಜ.15: ದಕ್ಷಿಣ ಏಶ್ಯಾ ಮತ್ತು ಸಹಾರಾ ಉಪವಲಯದ ಆಫ್ರಿಕನ್ ದೇಶಗಳಲ್ಲಿ ಸುಮಾರು 1 ಶತಕೋಟಿ ಜನರು ವಿದ್ಯುತ್ ಇಲ್ಲದ ಆರೋಗ್ಯ ವ್ಯವಸ್ಥೆಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ಸರಾಸರಿ 10 ಆರೋಗ್ಯ ಕೇಂದ್ರಗಳಲ್ಲಿ ಒಂದು ಆರೋಗ್ಯ ಕೇಂದ್ರ ವಿದ್ಯುತ್ ವ್ಯವಸ್ಥೆಯಿಂದ ವಂಚಿತವಾಗಿದೆ ಎಂದು ವರದಿಯನ್ನು ಉಲ್ಲೇಖಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ.
ಈ ವಲಯದ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಆರೋಗ್ಯ ಕೇಂದ್ರಗಳು ವಿಶ್ವಾಸಾರ್ಹವಲ್ಲದ ವಿದ್ಯುತ್ ವ್ಯವಸ್ಥೆ ಅಥವಾ ವಿದ್ಯುತ್ ಸೌಲಭ್ಯವೇ ಇಲ್ಲದ ಸ್ಥಿತಿಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಬ್ಯಾಂಕ್, ಅಂತರಾಷ್ಟ್ರೀಯ ನವೀಕೃತ ಇಂಧನ ಏಜೆನ್ಸಿ(ಐಆರ್ಇಎನ್ಎ) ಮತ್ತು ಎಲ್ಲರಿಗೂ ಸುಸ್ಥಿರ ಇಂಧನ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆಗೊಳಿಸಿದ ವರದಿ ಉಲ್ಲೇಖಿಸಿದೆ.
ಗುಣಮಟ್ಟದ ಆರೋಗ್ಯಸೇವೆ ಒದಗಿಸಲು ಆರೋಗ್ಯ ವ್ಯವಸ್ಥೆಗಳಿಗೆ ವಿದ್ಯುತ್ ವ್ಯವಸ್ಥೆ ಅತೀ ಮುಖ್ಯವಾಗಿದೆ. ಹೆರಿಗೆ, ಹೃದಯಾಘಾತದ ಚಿಕಿತ್ಸೆ, ಜೀವರಕ್ಷಕ ರೋಗನಿರೋಧಕಗಳನ್ನು ನೀಡಲು ವಿದ್ಯುತ್ ವ್ಯವಸ್ಥೆ ಅಗತ್ಯ. ಎಲ್ಲಾ ಆರೋಗ್ಯಕೇಂದ್ರ, ಆರೋಗ್ಯ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹವಲ್ಲದ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ತಲುಪಲಾಗದು. ಆರೋಗ್ಯ ಕೇಂದ್ರಗಳಿಗೆ ವಿಶ್ವಾಸಾರ್ಹ ವಿದ್ಯುತ್ ವ್ಯವಸ್ಥೆ ಲಭ್ಯವಾದರೆ ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಚಾಲನೆಗೊಳಿಸಬಹುದು, ಚಿಕಿತ್ಸಾಲಯದ ಶೀತಲೀಕರಣ ವ್ಯವಸ್ಥೆಯಲ್ಲಿ ಜೀವರಕ್ಷಕ ಲಸಿಕೆಗಳನ್ನು ಸಂರಕ್ಷಿಸಬಹುದು ಮತ್ತು ಆರೋಗ್ಯ ಕಾರ್ಯಕರ್ತರು ನಿರ್ಣಾಯಕ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಸಾಧ್ಯ ಎಂದು ವರದಿ ಹೇಳಿದೆ.
ಆರೋಗ್ಯ ವ್ಯವಸ್ಥೆಗಳಲ್ಲಿ ವಿದ್ಯುತ್ ಲಭ್ಯತೆಯು ಬದುಕು ಮತ್ತು ಸಾವಿನ ನಡುವಿನ ವ್ಯತ್ಯಾಸಕ್ಕೆ ಕಾರಣವಾಗಬಹುದು. ಆರೋಗ್ಯ ರಕ್ಷಣಾ ಸೌಲಭ್ಯಗಳಿಗಾಗಿ ವಿಶ್ವಾಸಾರ್ಹ, ಶುದ್ಧ ಮತ್ತು ಸುಸ್ಥಿರ ಶಕ್ತಿಮೂಲದಲ್ಲಿ ಹೂಡಿಕೆ ಮಾಡುವುದು ಸಾಂಕ್ರಾಮಿಕ ಸನ್ನದ್ಧತೆಗೆ ಮಾತ್ರವಲ್ಲ, ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲೂ ಅತೀ ಮುಖ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ `ಆರೋಗ್ಯಕರ ಜನಸಂಖ್ಯೆ' ವಿಭಾಗದ ಸಹಾಯಕ ಪ್ರಧಾನಿ ನಿರ್ದೇಶಕಿ ಡಾ. ಮರಿಯಾ ನೆಯ್ರಾ ಹೇಳಿದ್ದಾರೆ.