ಪೆರು: ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ

ಲಿಮಾ, ಜ.15: ಕ್ಷಿಪ್ರ ಚುನಾವಣೆ ಹಾಗೂ ಬಂಧನದಲ್ಲಿರುವ ಮಾಜಿ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲೊ ಅವರ ಬಿಡುಗಡೆಗೆ ಆಗ್ರಹಿಸಿ ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿ ಲಿಮಾ ಹಾಗೂ ಇತರ 3 ಪ್ರಾಂತಗಳಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿರುವುದಾಗಿ ಪೆರು ಸರಕಾರ ಶನಿವಾರ ತಡರಾತ್ರಿ ಘೋಷಿಸಿದೆ.
ಜನವರಿ 15ರಿಂದ ಮುಂದಿನ 30 ದಿವಸ ತುರ್ತುಪರಿಸ್ಥಿತಿ ಜಾರಿಯಲ್ಲಿ ಇರಲಿದೆ. ಈ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೇನೆಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಮತ್ತು ಚಳವಳಿ ನಡೆಸುವುದು, ಸಭೆ ಸೇರುವಂತಹ ಕೆಲವು ಸಾಂವಿಧಾನಿಕ ಹಕ್ಕುಗಳಲ್ಲಿ ಅಮಾನತುಗೊಳಿಸಲಾಗಿದೆ ಎಂದು ಸರಕಾರ ಅಧಿಸೂಚನೆ ಜಾರಿಗೊಳಿಸಿದೆ.
ಲಿಮಾ ನಗರ, ಅದರ ಪಕ್ಕದಲ್ಲಿರುವ ಕುಸ್ಕೊ, ಪುನೊ ಮತ್ತು ಕಲ್ಲಾವೊ ಬಂದರು ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಂಡಿದೆ. ತೀವ್ರ ಪ್ರತಿಭಟನೆಯ ಕೇಂದ್ರವಾಗಿದ್ದ ದಕ್ಷಿಣ ಪೆರು ಸಹಿತ ದೇಶದಾದ್ಯಂತ ಶನಿವಾರ 100ಕ್ಕೂ ಅಧಿಕ ಕಡೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪ್ರತಿಭಟನೆಯ ಮಧ್ಯೆಯೇ, ಪೆರುವಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅತ್ಯಂತ ಮಹತ್ವದ್ದಾಗಿರುವ ಕುಸ್ಕೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶನಿವಾರ ಮತ್ತೆ ತೆರೆಯಲಾಗಿದೆ.
ಡಿಸೆಂಬರ್ನಲ್ಲಿ, ತನ್ನ ವಿರುದ್ಧ ಸಂಸತ್ತಿನಲ್ಲಿ ದೋಷಾರೋಪಣೆ ಪ್ರಕ್ರಿಯೆಗೂ ಮುನ್ನ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲೊ ಕ್ಯಾಸ್ಟಿಲೊ ಸಂಸತ್ತನ್ನು ವಿಸರ್ಜಿಲು ಪ್ರಯತ್ನಿಸಿದ್ದ ಬಳಿಕ ಕ್ಯಾಸ್ಟಿಲೊರನ್ನು ಪದಚ್ಯುತಗೊಳಿಸಿ ಬಂಧಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಮತ್ತು ಹೊಸದಾಗಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಅವರ ಬೆಂಬಲಿಗರು ಬೀದಿಗಿಳಿದಿದ್ದಾರೆ. ಪ್ರತಿಭಟನೆಗೆ ಮಣಿದು ಪದತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹಾಲಿ ಅಧ್ಯಕ್ಷೆ ಬೊಲುರೆಟ್ ಹೇಳಿದ್ದಾರೆ.







