ರಶ್ಯದ ದಾಳಿಯಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿಕೆ: ಉಕ್ರೇನ್

ಕೀವ್, ಜ.15: ಉಕ್ರೇನ್ನ ದ್ನಿಪ್ರೊ ನಗರದ ವಸತಿ ಸಮುಚ್ಛಯದ ಮೇಲೆ ಶನಿವಾರ ರಶ್ಯ ನಡೆಸಿದ ವಾಯದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ. ಮೃತರಲ್ಲಿ 15 ವರ್ಷದ ಬಾಲಕಿಯೂ ಸೇರಿದ್ದು ಇತರ 73 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ನ ಪ್ರಾದೇಶಿಕ ಸಮಿತಿಯ ಮುಖ್ಯಸ್ಥ ಮಿಕೊಲಾ ಲುಕಷುಕ್ ಹೇಳಿದ್ದಾರೆ.
ರಶ್ಯದ ದಾಳಿಯಲ್ಲಿ 10ಕ್ಕೂ ಅಧಿಕ ಕಟ್ಟಡಗಳು ಕುಸಿದು ಬಿದ್ದಿದ್ದು ಕುಸಿದು ಬಿದ್ದಿರುವ ಕಟ್ಟಡದ ಅವಶೇಷದ ಅಡಿಯಿಂದ 20ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಇನ್ನೂ 40ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರುವ ಶಂಕೆಯಿದೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಲೆಂಟಿನ್ ರೆಝ್ನಿಚೆಂಕೊ ರವಿವಾರ ಹೇಳಿದ್ದಾರೆ. ರಶ್ಯ ಸೇನೆ ಎಕ್ಸ್-22 ಕ್ಷಿಪಣಿಯಿಂದ ದಾಳಿ ನಡೆಸಿದ್ದು ಇದನ್ನು ತಡೆಗಟ್ಟುವ ಸಾಮಥ್ರ್ಯ ನಮ್ಮ ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಇಲ್ಲ. ಆದ್ದರಿಂದ ಪಾಶ್ಚಿಮಾತ್ಯ ದೇಶಗಳು ತಕ್ಷಣ ಇಂತಹ ಕ್ಷಿಪಣಿಗಳನ್ನು ಹೊಡೆದುರುಳಿಸುವ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಉಕ್ರೇನ್ ಸೇನೆ ಒತ್ತಾಯಿಸಿದೆ. ರಶ್ಯದ ನಿರಂತರ ದಾಳಿಯಿಂದ ಈ ಪ್ರದೇಶದಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ಉಕ್ರೇನ್ನ ವಸತಿ ಸಮುಚ್ಛಯಕ್ಕೆ ಅಪ್ಪಳಿಸಿ ವ್ಯಾಪಕ ಸಾವುನೋವಿಗೆ ಕಾರಣವಾಗಿರುವ ರಶ್ಯದ ಎಕ್ಸ್-22 ಕ್ಷಿಪಣಿಯ ಅವಶೇಷ ತನ್ನ ಭೂಪ್ರದೇಶದಲ್ಲಿ ಬಿದ್ದಿದೆ ಎಂದು ಉಕ್ರೇನ್ನ ನೆರೆದೇಶ ಮೊಲ್ದೋವಾ ರವಿವಾರ ಹೇಳಿದೆ. ಉಕ್ರೇನ್ ವಿರುದ್ಧದ ರಶ್ಯದ ಕ್ರೂರ ಯುದ್ಧವು ಮೊಲ್ದೋವಾ ಮೇಲೆ ಮತ್ತೊಮ್ಮೆ ನೇರ ಪರಿಣಾಮ ಬೀರುತ್ತಿದೆ. ಶನಿವಾರದ ತೀವ್ರ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ' ಎಂದು ಅಧ್ಯಕ್ಷೆ ಮಾಯುವಾ ಸಂಧು ಟ್ವೀಟ್ ಮಾಡಿದ್ದಾರೆ.