ಸೊಮಾಲಿಯಾ: ಬಾಂಬ್ ಸ್ಫೋಟದಲ್ಲಿ ಕನಿಷ್ಟ 8 ಮಂದಿ ಮೃತ್ಯು

ಮೊಗದಿಶು, ಜ.15: ಮಧ್ಯ ಸೊಮಾಲಿಯಾದ ಸರಕಾರಿ ಕಟ್ಟಡದ ಬಳಿ ಕಾರುಬಾಂಬ್ ಸ್ಫೋಟದಲ್ಲಿ ಕನಿಷ್ಟ 8 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಅಲ್-ಶಬಾಬ್ ಸಂಘಟನೆ ಈ ಕೃತ್ಯದ ಹೊಣೆ ವಹಿಸಿಕೊಂಡಿದೆ.
ಬುಲೊಬುರ್ಡ್ ನಗರದ ಹಿರಾನ್ ಜಿಲ್ಲೆಯಲ್ಲಿ ಸರಕಾರಿ ಕಟ್ಟಡದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಓರ್ವ ವ್ಯಕ್ತಿ ಸ್ಫೋಟಕ ಇರಿಸಿದ್ದಾನೆ. ಸ್ಫೋಟದಿಂದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ತೀವ್ರ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಗರವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯನ್ನು ಸ್ಫೋಟಿಸುವ ಸಂಚು ಹೂಡಿದ್ದ ಬಾಂಬರ್, ಬಳಿಕ ತನ್ನ ಯೋಜನೆಯನ್ನು ಬದಲಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟದ ತೀವ್ರತೆಗೆ ಹಲವು ಕಟ್ಟಡಗಳು ಮತ್ತು ಪ್ರಮುಖ ಮಸೀದಿಗೆ ತೀವ್ರ ಹಾನಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ , ಹಿರಾನ್ ನಗರದಲ್ಲಿ ಕಾರುಬಾಂಬ್ ಸ್ಫೋಟಿಸಿದ್ದು ಬಾಂಬ್ ಇರಿಸಿದ್ದ ವ್ಯಕ್ತಿ ಮೃತನಾಗಿದ್ದಾನೆ. ಜಲಾಲಕ್ಸಿ ನಗರದಲ್ಲಿ ವಾಹನದಲ್ಲಿ ಸ್ಫೋಟಕ ಇರಿಸಿ ಪರಾರಿಯಾಗಲು ಪ್ರಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದು ಬಾಂಬನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.