ಮೂಳೂರು | ರಸ್ತೆ ಅಪಘಾತ: ಉದ್ಯಮಿ ಬಾಲಕೃಷ್ಣ ಪೂಜಾರಿ ಮೃತ್ಯು
ಕಾಪು, ಜ.16: ಮೂಳೂರಿನಲ್ಲಿ ರವಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬೈಯ ಉದ್ಯಮಿ ಬಾಲಕೃಷ್ಣ ಜಿ. ಪೂಜಾರಿ(60) ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ, ಮುಂಬೈಯಲ್ಲಿ ಉದ್ಯಮಿಯಾಗಿದ್ದ ಬಾಲಕೃಷ್ಣ ಜಿ. ಪೂಜಾರಿ ಎರಡು ದಿನಗಳ ಹಿಂದೆ ಊರಿಗೆ ಆಗಮಿಸಿದ್ದು, ಸ್ವಗೃಹ ಮೂಳೂರಿನ ಶಶಿಭವನದಲ್ಲಿ ವಾಸವಿದ್ದರು. ರವಿವಾರ ಸಂಜೆ ಅಂಗಡಿಗೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಬಾಲಕೃಷ್ಣರಿಗೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಬಿಲ್ಲವರ ಸಂಘದ ಮುಂಭಾಗದಲ್ಲಿ ಕಾರೊಂದು ಢಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಗಂಭೀರ ಏಟಾಗಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಪುತ್ರಿ ಮತ್ತು ಸಹೋದರ-ಸಹೋದರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story