ಬೆಂಗಳೂರು | ಗಾಂಜಾ ಸೇವನೆ ಕೇಸ್ ದಾಖಲಿಸುವ ಬೆದರಿಕೆವೊಡ್ಡಿ ಹಣ ಸುಲಿಗೆ ಆರೋಪ: ಇಬ್ಬರು ಪೊಲೀಸರ ಅಮಾನತು
ಬೆಂಗಳೂರು, ಜ.16: ಖಾಸಗಿ ಕಂಪೆನಿ ಉದ್ಯೋಗಿವೊರ್ವನನ್ನು ಅಡ್ಡಗಟ್ಟಿ ಗಾಂಜಾ ಸೇವನೆ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.
ಇಲ್ಲಿನ ಬಂಡೇಪಾಳ್ಯ ಪೊಲೀಸ್ ಠಾಣೆಯ ಪೇದೆಗಳಾದ ಮಲ್ಲೇಶ್ ಹಾಗೂ ಕೀರ್ತಿಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಜ.11ರಂದು ತಡರಾತ್ರಿ ನಡೆದಿದ್ದ ಘಟನೆ ಸಂಬಂಧ ಉದ್ಯೋಗಿ ವೈಭವ್ ಪಟೇಲ್ ಅವರು ಟ್ವೀಟ್ ಮೂಲಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಬಳಿಕ ವೈಭವ್ ಅವರನ್ನು ಸಂಪರ್ಕಿಸಿದ್ದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಲಿಖಿತ ದೂರು ಪಡೆದು ತನಿಖೆ ನಡೆಸಿದ್ದರು. ಇಬ್ಬರು ಪೇದೆಗಳು ಹಣ ಸುಲಿಗೆ ಮಾಡಿದ್ದ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಇಬ್ಬರನ್ನೂ ಅಮಾನತು ಮಾಡಿ ಸಿ.ಕೆ.ಬಾಬಾ ಆದೇಶ ಹೊರಡಿಸಿದ್ದಾರೆ.
ಏನಿದು ಘಟನೆ?: ಜ.11ರಂದು ತಡರಾತ್ರಿ ಕೆಲಸ ಮುಗಿಸಿ ಬೈಕ್‍ನಲ್ಲಿ ಮನೆಯತ್ತ ಹೊರಟ್ಟಿದ್ದ ವೇಳೆ ವೈಭವ್ ಪಟೇಲ್ ಅವರನ್ನು ಎಚ್‍ಎಸ್‍ಆರ್ ಲೇಔಟ್‍ನ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು ಬೈಕ್ ಅಡ್ಡಗಟ್ಟಿದ್ದರು.
ಆನಂತರ, ಬ್ಯಾಗ್ ಪರಿಶೀಲಿಸಿ ಗಮನಕ್ಕೆ ಬಾರದಂತೆ ಬ್ಯಾಗ್‍ನಲ್ಲಿ ಸೊಪ್ಪು ಇರಿಸಿದ್ದರು.ಬಳಿಕ ಬ್ಯಾಗ್‍ನಿಂದ ಸೊಪ್ಪು ಹೊರಗೆ ತೆಗೆದಂತೆ ನಟಿಸಿದ್ದ ಪೊಲೀಸರು, ಗಾಂಜಾ ಸೇವನೆ ಮಾಡುತ್ತೀಯಾ ಎಂದು ಕೇಳಿದಲ್ಲದೆ, ನಿನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಜೈಲಿಗೆ ಹಾಕಿದರೆ, ನಮಗೆ ತಲಾ 15 ಸಾವಿರ ಬಹುಮಾನ ಬರಲಿದೆ ಎಂದಿದ್ದರು.
ಕೆಲ ಸಮಯದ ಬಳಿಕ ಜೇಬಿನಲ್ಲಿದ್ದ 2,500 ರೂ. ಕಸಿದುಕೊಂಡಿದಲ್ಲದೆ, ಎಟಿಎಂ ಘಟಕಕ್ಕೆ ಹೋಗಿ ಪುನಃ 4 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು. ಇದಾದ ಬಳಿಕ ಖಾತೆಯಲ್ಲಿ ಹಣವಿಲ್ಲವೆಂದು ಕಣ್ಣೀರು ಹಾಕಿದಾಗ ಬಿಟ್ಟು ಕಳುಹಿಸಿದ್ದರು ಎಂದು ಪಟೇಲ್ ದೂರಿನಲ್ಲಿ ಉಲ್ಲೇಖಿಸಿದ್ದರು.