ಶೇ. 20ರಷ್ಟು ಉದ್ಯೋಗ ಕಡಿತ ಘೋಷಿಸಿದ ಮತ್ತೊಂದು ಕಂಪೆನಿ

ಹೊಸದಿಲ್ಲಿ: ಬಂಡವಾಳ ಹೂಡಿಕೆದಾರರು ಶೇರು ಮಾರುಕಟ್ಟೆ ಮೌಲ್ಯವು ಅನಿಶ್ಚಿತವಾಗಿರುವುದರಿಂದ ಕಳವಳಗೊಂಡಿದ್ದು, ಇದರಿಂದ ತಂತ್ರಜ್ಞಾನ ಕಂಪನಿಗಳು ವೆಚ್ಚ ಕಡಿತದ ಭಾಗವಾಗಿ ಉದ್ಯೋಗ ಕಡಿತ ಮಾಡುತ್ತಲೇ ಸಾಗಿವೆ. ಈ ಸಾಲಿಗೆ ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್ ಹಾಗೂ ಟೆಮಾಸೆಕ್ ಬೆಂಬಲ ಹೊಂದಿರುವ ಸಾಮಾಜಿಕ ಮಾಧ್ಯಮ ShareChat ಹೊಸದಾಗಿ ಸೇರ್ಪಡೆಯಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ ಸಾಧ್ಯತೆಯನ್ನು ಅಂದಾಜಿಸಿರುವ ShareChat, "ಬಂಡವಾಳ ಲಭ್ಯತೆ ಮೇಲೆ ಪರಿಣಾಮ ಬೀರಲಿರುವ ಹಲವಾರು ಬಾಹ್ಯ ಆರ್ಥಿಕ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲಲು" ಕಂಪನಿಯ ಶೇ. 20ರಷ್ಟು ಉದ್ಯೋಗ ಕಡಿತಗೊಳಿಸಲಾಗುವುದು ಎಂದು ಪ್ರಕಟಿಸಿದೆ.
ಬೆಂಗಳೂರು ಮೂಲದ ಮೊಹಲ್ಲಾ ಟೆಕ್ ಪ್ರೈ. ಲಿ. ಮಾಲೀಕತ್ವದ ShareChat ಹಾಗೂ ಅದರ ಕಿರುಚಿತ್ರಗಳ ತಂತ್ರಾಂಶ Moj ಸಂಸ್ಥೆಗಳು 500 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ShareChat ಕಂಪನಿಯ ಮೌಲ್ಯವು 5 ಶತಕೋಟಿ ಡಾಲರ್ ಆಗಿದ್ದು, 2200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಕಂಪನಿಯ ವಕ್ತಾರರೊಬ್ಬರು, "ಒಂದು ಕಂಪನಿಯಾಗಿ ನಾವು ನಮ್ಮ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ನೋವಿನ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ನಮ್ಮ ನವೋದ್ಯಮ ಕಂಪನಿಯು ಪ್ರಾರಂಭವಾದಂದಿನಿಂದ ನಮ್ಮೊಂದಿಗಿದ್ದ ಶೇ. 20ರಷ್ಟು ಅದ್ಭುತ, ಪ್ರತಿಭಾವಂತ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದ್ದೇವೆ" ಎಂದು ತಿಳಿಸಿದ್ದು, "ಬಂಡವಾಳ ಹೂಡಿಕೆಯು ದುಬಾರಿಯಾಗಿ ಪರಿಣಮಿಸಿದ್ದು, ಸಂಸ್ಥೆಯು ತನ್ನ ಲಾಭದ ಕಡೆ ಆದ್ಯತೆ ನೀಡಬೇಕಿದೆ ಮತ್ತು ಅತಿ ಹೆಚ್ಚು ಪರಿಣಾಮಕಾರಿ ಯೋಜನೆಗಳಲ್ಲಿ ಬಂಡವಾಳ ತೊಡಗಿಸಬೇಕಿದೆ" ಎಂದೂ ಹೇಳಿದ್ದಾರೆ.
ಡಿಸೆಂಬರ್, 2022ರಲ್ಲಿ ತನ್ನ ಆನ್‌ಲೈನ್ ಮೋಜಿನ ಕ್ರೀಡಾ ವೇದಿಕೆಯಾದ ಜೀತ್ 11 ಅನ್ನು ಸ್ಥಗಿತಗೊಳಿಸಿದ ಬೆನ್ನಿಗೇ ಮೊಹಿಲ್ಲಾ ಟೆಕ್ ಈ ದೊಡ್ಡ ನಿರ್ಧಾರವನ್ನು ಪ್ರಕಟಿಸಿದೆ. ಆಗ ಸುಮಾರು 100 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.
ಇದನ್ನೂ ಓದಿ: ಶತಕೋಟ್ಯಧಿಪತಿಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿದರೂ ಎರಡು ಶತಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಬಹುದು: ವರದಿ