ಮಂಗಳೂರು: ಕಮರಿಗೆ ಉರುಳಿ ಬಿದ್ದ ಟ್ರಕ್; ಇಬ್ಬರಿಗೆ ಗಾಯ

ಮಂಗಳೂರು: ಇಲ್ಲಿನ ಜಪ್ಪಿನಮೊಗರು ಎಂಬಲ್ಲಿ ಟೈರ್ ಸ್ಫೋಟಗೊಂಡ ಪರಿಣಾಮವಾಗಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿದ್ದು, ಲಾರಿಯಲ್ಲಿದ್ದ ಇಬ್ಬರಿಗೆ ಗಾಯವಾಗಿರುವ ಘಟನೆ ಸೋಮವಾರ ಸಂಜೆ ಸಂಭವಿಸಿರುವುದು ವರದಿಯಾಗಿದೆ.
ಚಾಲಕ ತಮಿಳುನಾಡಿನ ಸುಕ್ರಕ್ತಿಲಿ ಗ್ರಾಮದ ನಾಗರಾಜ (46) ಮತ್ತು ಕ್ಲೀನರ್ ಕೂಳೂರು ಮರವಟ್ಟು ಎಂಬಲ್ಲಿನ ನಿವಾಸಿ ಅಯ್ಯ ತುರೈ (50 ವರ್ಷ) ಗಾಯಗೊಂಡಿದ್ದಾರೆ.
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಾಗುತ್ತಿದ್ದ ತಮಿಳುನಾಡಿನ ಲಾರಿಯ ಮುಂದಿನ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.