ಪೆರು: ತುರ್ತು ಪರಿಸ್ಥಿತಿ 1 ತಿಂಗಳು ವಿಸ್ತರಣೆ
ಲಿಮಾ, ಜ.16: ಸರಕಾರದ ವಿರುದ್ಧ ತೀವ್ರ ಪ್ರತಿಭಟನೆಯ ಕೇಂದ್ರವಾಗಿದ್ದ ರಾಜಧಾನಿ ಲಿಮಾ ಹಾಗೂ ದಕ್ಷಿಣದ ಇತರ 2 ಪ್ರಾಂತಗಳಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮತ್ತೆ ಒಂದು ತಿಂಗಳು ವಿಸ್ತರಿಸಲಾಗಿದೆ ಎಂದು ಪೆರು ಸರಕಾರ ಘೋಷಿಸಿದೆ.
ಡಿಸೆಂಬರ್ನಲ್ಲಿ, ತನ್ನ ವಿರುದ್ಧ ಸಂಸತ್ತಿನಲ್ಲಿ ದೋಷಾರೋಪಣೆ ಪ್ರಕ್ರಿಯೆಗೂ ಮುನ್ನ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲೊ ಕ್ಯಾಸ್ಟಿಲೊ ಸಂಸತ್ತನ್ನು ವಿಸರ್ಜಿಸಲು ಪ್ರಯತ್ನಿಸಿದ್ದ ಬಳಿಕ ಕ್ಯಾಸ್ಟಿಲೊರನ್ನು ಪದಚ್ಯುತಗೊಳಿಸಿ ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಮತ್ತು ಹೊಸದಾಗಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಅವರ ಬೆಂಬಲಿಗರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ ಮಧ್ಯಭಾಗದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಇದೀಗ ತುರ್ತು ಪರಿಸ್ಥಿತಿಯನ್ನು 1 ತಿಂಗಳು ವಿಸ್ತರಿಸುವ ಆದೇಶಕ್ಕೆ ಅಧ್ಯಕ್ಷೆ ಡಿನಾ ಬೊಲುರೆಟ್ ಸಹಿ ಹಾಕಿದ್ದಾರೆ.
ಲಿಮಾ ನಗರ, ಅದರ ಪಕ್ಕದಲ್ಲಿರುವ ಕುಸ್ಕೊ, ಪುನೊ ಮತ್ತು ಕಲ್ಲಾವೊ ಬಂದರು ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಂಡಿದೆ. ಜನವರಿ 15ರಿಂದ ಮುಂದಿನ 30 ದಿವಸ ತುರ್ತುಪರಿಸ್ಥಿತಿ ಜಾರಿಯಲ್ಲಿ ಇರಲಿದೆ. ಈ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೇನೆಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಮತ್ತು ಚಳವಳಿ ನಡೆಸುವುದು, ಸಭೆ ಸೇರುವಂತಹ ಕೆಲವು ಸಾಂವಿಧಾನಿಕ ಹಕ್ಕುಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸರಕಾರ ಅಧಿಸೂಚನೆ ಜಾರಿಗೊಳಿಸಿದೆ.