ಕೋವಿಡ್ ಸಾಂಕ್ರಾಮಿಕ: ಚೀನಾದಲ್ಲಿ 5 ವಾರದಲ್ಲಿ 9 ಲಕ್ಷ ಮಂದಿ ಸಾವು?
ಬೀಜಿಂಗ್: ಚೀನಾದಲ್ಲಿ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ್ದು, ಕಳೆದ ಐದು ವಾರಗಳಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಘ ಸಂಸ್ಥೆಗಳ ತಜ್ಞರು ಅಂದಾಜಿಸಿದ್ದಾರೆ ಎಂದು times of india ವರದಿ ಮಾಡಿದೆ .
ಕಳೆದ ಐದು ವಾರದ ಅವಧಿಯಲ್ಲಿ ದೇಶದಲ್ಲಿ ಸುಮಾರು 60 ಸಾವಿರ ಕೋವಿಡ್ ಸಂಬಂಧಿ ಸಾವುಗಳು ಸಂಭವಿಸಿವೆ ಎಂದು ಕಳೆದ ವಾರ ಚೀನಾ ಅಧಿಕೃತವಾಗಿ ಪ್ರಕಟಿಸಿದ ಬೆನ್ನಲ್ಲೇ, ದೇಶದಲ್ಲಿ ಲಕ್ಷಾಂತರ ಸಾವುಗಳು ಸಂಭವಿಸಿವೆ ಎಂದು ತಜ್ಞರು ಹೇಳಿದ್ದಾರೆ.
ಕೋವಿಡ್ ಶೂನ್ಯ ನೀತಿಯನ್ನು ಡಿಸೆಂಬರ್‌ನಲ್ಲಿ ಸಡಿಲಿಸಿದ ಬೆನ್ನಲ್ಲೇ ಒಮಿಕ್ರಾನ್ ಸೋಂಕಿನಿಂದ 59938 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಬಹಿರಂಗಪಡಿಸಿತ್ತು. ಆದರೆ ಇದಕ್ಕೆ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಸಂಖ್ಯೆಗಳು ಬೃಹತ್ ಸಂಖ್ಯೆಯ ಒಂದು ಅಂಶ ಮಾತ್ರ ಎಂದು ಕ್ಯಾಲಿಫೋರ್ನಿಯಾ ವಿವಿಯ ಫೀಲ್ಡಿಂಗ್ ಸೊಸೈಟಿ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಝುಯೊ ಫೆಂಗ್ ತ್ಸಾಂಗ್ ಹೇಳಿದ್ದಾರೆ.
ಚೀನಾ ಅಧಿಕಾರಿಗಳು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಆಧಾರದಲ್ಲಿ ಅಧ್ಯಯನ ನಡೆಸಿದ ಪೆಗಿಂಗ್ ವಿವಿ ನ್ಯಾಷನಲ್ ಸ್ಕೂಲ್ ಆಫ್ ಡೆವಲಪ್‌ಮೆಂಟ್, ಜನವರಿ ಮಧ್ಯದ ವೇಳೆಗೆ ಚೀನಾದಲ್ಲಿ ಶೇಕಡ 64ರಷ್ಟು ಮಂದಿಗೆ ಸೋಂಕು ತಗುಲಿದೆ ಎಂದು ಅಂದಾಜಿಸಿದೆ ಹಾಗೂ ಕನಿಷ್ಠ ಎಂದರೆ 0.1ರ ಮರಣ ದರದಲ್ಲಿ 9 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವಾಸ್ತವವಾಗಿ ಸಂಭವಿಸಿದ ಸಾವಿನ ಸಂಖ್ಯೆಯ ಶೇಕಡ 7ರಷ್ಟನ್ನು ಮಾತ್ರ ಅಧಿಕಾರಿಗಳು ಪ್ರಕಟಿಸಿದ್ದಾರೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಅಧಿಕಾರಿಗಳು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕೋವಿಡ್ ಸೋಂಕಿನಿಂದ ದೇಶದ ಪ್ರತಿ 10 ಲಕ್ಷ ಮಂದಿಯ ಪೈಕಿ ಕೇವಲ 1.17 ಮಂದಿ ಮಾತ್ರ ಸಾವಿಗೀಡಾಗಿದ್ದರೆ. ಇದು ಇತರ ಕೋವಿಡ್‌ಪೀಡಿತ ದೇಶಗಳ ಸಾವಿನ ಸರಾಸರಿ ಸಂಖ್ಯೆಗಿಂತ ತೀರಾ ಕಡಿಮೆ. ಚೀನಾದಲ್ಲಿ ಕನಿಷ್ಠ 3.9 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದು, ಇತರ ದೇಶಗಳಲ್ಲಿ ಸಂಭವಿಸಿದ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ 9.45 ಲಕ್ಷದವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ.