6 ದಶಕಗಳಲ್ಲಿ ಪ್ರಥಮ ಬಾರಿಗೆ ಚೀನಾದ ಜನಸಂಖ್ಯೆ ಇಳಿಮುಖ

ಬೀಜಿಂಗ್, ಜ.17: ಚೀನಾದ ಜನಸಂಖ್ಯೆಯು 6 ದಶಕಗಳಲ್ಲಿ ಮೊದಲ ಬಾರಿಗೆ 2022ರಲ್ಲಿ ಕುಗ್ಗಲು ಪ್ರಾರಂಭಿಸಿದ್ದು ಗಂಭೀರವಾದ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿರುವ ವಿಶ್ವದ ಎರಡನೆಯ ಅತೀ ದೊಡ್ಡ ಆರ್ಥಿಕತೆಯ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಬ್ಯೂರೋ ಮಂಗಳವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ.
2022ರಲ್ಲಿ ಚೀನಾದಲ್ಲಿ ಜನನ ಪ್ರಮಾಣ 9.56 ದಶಲಕ್ಷ ಆಗಿದ್ದರೆ 10.41 ದಶಲಕ್ಷ ಜನ ಮರಣ ಹೊಂದಿದ್ದಾರೆ. 1961ರ ಬಳಿಕ ಇದೇ ಮೊದಲ ಬಾರಿಗೆ ಚೀನಾದಲ್ಲಿ ಸಾವಿನ ಪ್ರಮಾಣ ಜನನದ ಪ್ರಮಾಣವನ್ನು ಮೀರಿಸಿದೆ ಎಂದು ಸರಕಾರ ಹೇಳಿದೆ.
2022ರ ಅಂತ್ಯದಲ್ಲಿ ಚೀನಾ 1.41 ಶತಕೋಟಿ ಜನಸಂಖ್ಯೆಯನ್ನು ಹೊಂದಿದ್ದು 2021ರ ಅಂತ್ಯಕ್ಕೆ ಹೋಲಿಸಿದರೆ ಇದು 8,50,000ದಷ್ಟು ಕಡಿಮೆಯಾಗಿದೆ. 1961(ಮಹಾಕ್ಷಾಮದ ಅಂತಿಮ ವರ್ಷ)ರ ಬಳಿಕ ಮೊದಲ ಕುಸಿತವನ್ನು ಇದು ಸೂಚಿಸುತ್ತದೆ. 2022ರಲ್ಲಿ ಸುಮಾರು 9.56 ದಶಲಕ್ಷ ಶಿಶುಗಳು ಜನಿಸಿದ್ದರೆ 2021ರಲ್ಲಿ ಸುಮಾರು 10.62 ದಶಲಕ್ಷ ಶಿಶುಗಳು ಹುಟ್ಟಿವೆ. ಕುಟುಂಬಗಳು ಹೆಚ್ಚು ಮಕ್ಕಳನ್ನು ಹೊಂದಲು ಸರಕಾರ ಪ್ರೋತ್ಸಾಹ ನೀಡುತ್ತಿದ್ದರೂ ಜನಸಂಖ್ಯೆ ಕುಸಿಯುತ್ತಿದೆ.
2022ರಲ್ಲಿ 10.41 ದಶಲಕ್ಷ ಜನರು ಮೃತಪಟ್ಟಿದ್ದರೆ 2021ರಲ್ಲಿ ಮೃತರ ಪ್ರಮಾಣ ಸುಮಾರು 10 ದಶಲಕ್ಷದಷ್ಟಿತ್ತು. ಜನರ ಪ್ರತಿಭಟನೆಗೆ ಮಣಿದು ಡಿಸೆಂಬರ್ನಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬಳಿಕ ಚೀನಾದಲ್ಲಿ ಕೋವಿಡ್ಗೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದ ಹಲವೆಡೆ ಸೋಂಕಿನ ಪ್ರಮಾಣ ನಿರಂತರ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೋವಿಡ್ ಸಂಬಂಧಿತ ಸಾವಿನ ಪ್ರಕರಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.ಜನಸಂಖ್ಯೆಯ ಪ್ರಮಾಣ ಕುಸಿಯುತ್ತಿರುವುದರಿಂದ ವಿಶ್ವದ ಅತ್ಯಧಿಕ ಜನಸಂಖ್ಯೆಯ ದೇಶ ಎಂಬ ದಾಖಲೆ ಚೀನಾದ ಕೈತಪ್ಪಿ ಭಾರತದ ವಶವಾಗುವ ಸಾಧ್ಯತೆಯಿದೆ.
‘2031ರಲ್ಲಿ ಚೀನಾದ ಜನಸಂಖ್ಯೆ ಉತ್ತುಂಗಕ್ಕೇರಲಿದ್ದು ಆ ಬಳಿಕ ಕುಸಿಯುತ್ತದೆ ’ ಎಂದು 2019ರ ವಿಶ್ವಸಂಸ್ಥೆ ವರದಿಯಲ್ಲಿ ಮುನ್ಸೂಚನೆ ನೀಡಲಾಗಿತ್ತು. ಆದರೆ ಕಳೆದ ವರ್ಷ ಈ ಮುನ್ಸೂಚನೆಯನ್ನು ಪರಿಷ್ಕರಿಸಿ, ಜನಸಂಖ್ಯೆ 2022ರ ಆರಂಭದಲ್ಲಿ ಉತ್ತುಂಗ ಮಟ್ಟ ತಲುಪಲಿದೆ ಎಂದು ವರದಿ ಮಾಡಿತ್ತು. ಕಾರ್ಮಿಕ ಬಲವು ಈಗಾಗಲೇ ಕುಗ್ಗುತ್ತಿದೆ, ಮನೆಗಳಿಗೆ ದೀರ್ಘಾವಧಿ ಬೇಡಿಕೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಮತ್ತು ಸರಕಾರವು ಕಡಿಮೆ ಅನುದಾನದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಪಾವತಿಗೆ ಹೆಣಗಬಹುದು.
ಸಾಮಾನ್ಯ ಜೀವಿತಾವಧಿಯಲ್ಲಿ ದೀರ್ಘಾವಧಿಯ ಏರಿಕೆಯೊಂದಿಗೆ ಜನನ ಪ್ರಮಾಣದ ಇಳಿಕೆಯು ಚೀನಾವನ್ನು ಜನಸಂಖ್ಯಾ ಬಿಕ್ಕಟ್ಟಿಗೆ ತಳ್ಳುತ್ತಿದೆ. ಇದು ಈ ಶತಮಾನದಲ್ಲಿ ಚೀನಾ ಮತ್ತದರ ಆರ್ಥಿಕತೆಯ ಮೇಲಷ್ಟೇ ಅಲ್ಲ, ಜಗತ್ತಿನ ಮೇಲೆಯೂ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಕಳೆದ 4 ದಶಕಗಳಲ್ಲಿ ಚೀನಾ ಆರ್ಥಿಕ ಸೂಪರ್ಪವರ್ ಆಗಿ ಹೊರಹೊಮ್ಮಿದೆ ಮತ್ತು ವಿಶ್ವದ ಕಾರ್ಖಾನೆಗಳ ತಾಣವಾಗಿದೆ. ಆ ರೂಪಾಂತರವು ಜೀವಿತಾವಧಿಯ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಚೀನಾದ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ. ಕಡಿಮೆ ಶಿಶುಗಳು ಜನಿಸುತ್ತಿದ್ದು ವಯಸ್ಕರ ಪ್ರಮಾಣ ಹೆಚ್ಚುತ್ತಿದೆ. 2035ರ ಹೊತ್ತಿಗೆ ಚೀನಾದಲ್ಲಿ 400 ದಶಲಕ್ಷ ಜನರು, ಅಂದರೆ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಪ್ರಮಾಣದವರು 60ಕ್ಕಿಂತ ಹೆಚ್ಚು ವಯಸ್ಸಿನವರಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಇದರ ಜೊತೆಗೆ ಮತ್ತೊಂದು ಆತಂಕಕಾರಿ ವಿದ್ಯಮಾನ ರೂಪುಗೊಳ್ಳುತ್ತಿದೆ. ಚೀನಾವು ಜಾಗತಿಕ ಆರ್ಥಿಕತೆಯ ಇಂಜಿನ್ ಆಗಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು ಇದಕ್ಕೆ ಪೂರಕವಾಗಿ, ಸಾಕಷ್ಟು ದುಡಿಯುವ ವಯಸ್ಸಿನ ಜನರ ಕೊರತೆಯಾಗಲಿದೆ. ಕಾರ್ಮಿಕರ ಕೊರತೆಯು ಈಗಾಗಲೇ ಅಗಾಧ ಒತ್ತಡ ಎದುರಿಸುತ್ತಿರುವ ಪಿಂಚಣಿ ವ್ಯವಸ್ಥೆಗೆ ತೆರಿಗೆ ಮತ್ತು ಆದಾಯದ ವಂತಿಗೆಯನ್ನು ಕಡಿಮೆಗೊಳಿಸಲಿದೆ.
ಚೀನಾದ ಜನನ ಪ್ರಮಾಣ, ಅಥವಾ ಪ್ರತೀ 1000 ಜನರಿಗೆ ನವಜಾತ ಶಿಶುಗಳ ಸಂಖ್ಯೆ ಕಳೆದ ವರ್ಷ 6.77ಕ್ಕೆ ತಲುಪಿದ್ದು ಇದು 1978ರ ಬಳಿಕದ ಕನಿಷ್ಟ ಪ್ರಮಾಣವಾಗಿದೆ. ಒಂದು ದಶಕದ ಹಿಂದೆ ಚೀನಾದಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆಯ ಪ್ರಮಾಣ(ಚೀನಾದ ಪ್ರಕಾರ 16ರಿಂದ 59 ವರ್ಷ) ಒಟ್ಟು ಜನಸಂಖ್ಯೆಯ 70%ದಷ್ಟಿದ್ದರೆ, 2022ರಲ್ಲಿ ಇದು 62%ಕ್ಕೆ ಕುಸಿದಿರುವುದು ದೇಶಕ್ಕೆ ಎದುರಾಗಲಿರುವ ಸಮಸ್ಯೆಯನ್ನು ಎತ್ತಿತೋರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.