ಮಲೇರಿಯಾ ಉಲ್ಬಣಕ್ಕೆ ಹವಾಮಾನ ಬದಲಾವಣೆ ಕಾರಣ: ವರದಿ

ದಾವೋಸ್, ಜ.17: ಹವಾಮಾನ ಬದಲಾವಣೆ ಸಮಸ್ಯೆಯು ಮಲೇರಿಯಾ ಸೋಂಕನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿನ ಭೀಕರ ಪ್ರವಾಹ ಹಾಗೂ 2021ರಲ್ಲಿ ಮೊಝಾಂಬಿಕ್ನಲ್ಲಿ ಚಂಡಮಾರುತದ ಬಳಿಕ ಜಾಗತಿಕವಾಗಿ ಮಲೇರಿಯಾ ಉಲ್ಬಣಗೊಂಡಿದೆ ಎಂದು ವಿಶ್ವದ ಬೃಹತ್ ಆರೋಗ್ಯನಿಧಿಯ ಮುಖ್ಯಸ್ಥ ಪೀಟರ್ ಸ್ಯಾಂಡ್ಸ್ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಪೀಟರ್ ‘ತೀವ್ರ ಹವಾಮಾನ ಸಮಸ್ಯೆ ಎದುರಾದಾಗಲೆಲ್ಲಾ ಮಲೇರಿಯಾ ಸೋಂಕು ಉಲ್ಬಣಗೊಳ್ಳುವುದು ಸಾಮಾನ್ಯವಾಗಿದೆ. ತೀವ್ರ ಹವಾಮಾನ ವೈಪರೀತ್ಯ ಸಂಭವಿಸಿದಾಗ ನಿಂತ ನೀರಿನ ಕೊಳಗಳು ಸೃಷ್ಟಿಯಾಗುತ್ತವೆ. ನಿಂತ ನೀರಿನಲ್ಲಿ ಮಲೇರಿಯಾದಂತಹ ಸಾಂಕ್ರಾಮಿಕಗಳು ಕ್ಷಿಪ್ರವಾಗಿ ಹರಡುತ್ತವೆ ಎಂದು ‘ಏಡ್ಸ್, ಟಿಬಿ ಮತ್ತು ಮಲೇರಿಯಾ’ ವಿರುದ್ಧ ಹೋರಾಡುವ ಆರೋಗ್ಯನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಪೀಟರ್ ಹೇಳಿದ್ದಾರೆ.
ಹವಾಮಾನ ಬದಲಾವಣೆಗಳು ಸೊಳ್ಳೆಗಳ ಭೌಗೋಳಿಕತೆಯನ್ನೂ ಬದಲಾಯಿಸುತ್ತವೆ. ಆಫ್ರಿಕಾದ ಎತ್ತರದ ಪ್ರದೇಶಗಳು, ಕೆನ್ಯಾ ಮತ್ತು ಇಥಿಯೋಪಿಯಾದಂತಹ ಪ್ರದೇಶಗಳು ಈ ಹಿಂದೆ ಸೊಳ್ಳೆಗಳಿಗೆ ಸೂಕ್ತವಾಗಿರಲಿಲ್ಲ. ಆದರೆ ತಾಪಮಾನ ಬದಲಾವಣೆಯಿಂದ ಈಗ ಅಲ್ಲಿಯೂ ಸೊಳ್ಳೆಗಳ ಪ್ರಮಾಣ ಹೆಚ್ಚಿದೆ. ಹವಾಮಾನ ಬದಲಾವಣೆಯು ರೋಗಗಳನ್ನು ನಿರ್ಮೂಲನ ಮಾಡುವ ಪ್ರಯತ್ನಗಳಿಗೆ ಅಡ್ಡಿಮಾಡುವ ಅಂಶಗಳಲ್ಲಿ ಒಂದಾಗಿದೆ ಎಂದವರು ಹೇಳಿದ್ದಾರೆ.