ಪಚ್ಚನಾಡಿ: ತ್ವರಿತಗತಿಯಲ್ಲಿ ‘ಬಯೋ ಮೈನಿಂಗ್’ ಕಾಮಗಾರಿ: ಮಂಗಳೂರು ಮೇಯರ್

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರಂಭಿಸಿರುವ ತ್ಯಾಜ್ಯಗಳ ಬಯೋ ಮೈನಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲು ನಾಲ್ಕು ವರ್ಷ ಅಗತ್ಯವಿದೆ. ಆದರೆ ಈ ಕಾಮಗಾರಿಯನ್ನು ತ್ವರಿತಗೊಳಿಸಿ ಮೂರು ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
ಮಂಗಳವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಚ್ಚನಾಡಿಯ ತ್ಯಾಜ್ಯಗಳನ್ನು ವಿಂಗಡಿಸಿ ಮರುಬಳಕೆ ನಡೆಸುವ ಕಾಮಗಾರಿಯ ಗುತ್ತಿಗೆ ವಹಿಸಿರುವ ನ್ಯಾಕೋ ಲಿ. ಕೆಲಸ ಆರಂಭಿಸಿದೆ. ಇದನ್ನು ಮುಗಿಸಲು ಒಂದು ವರ್ಷ ಬೇಕಾಗಿದೆ. ಆದರೆ ಮಳೆಗಾಲದಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲವಾಗಿದೆ ಎಂದರು.
ಜನವರಿ 6ರಂದು ಪಚ್ಚನಾಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿಯನ್ನು ನಂದಿಸುವ ಕಾರ್ಯವು ನಿನ್ನೆಗೆ ಶೇ.99ರಷ್ಟು ಪೂರ್ಣಗೊಂಡಿದೆ. ಪರಿಸರ ತಜ್ಞರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣೆ ಪಡೆಯು ಜ.13ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಹಾಗೂ ಹೆಚ್ಚುವರಿಯಾಗಿ ನೀರಿನ ಟ್ಯಾಂಕ್‌ಗಳನ್ನು ಸ್ಥಳದಲ್ಲಿ ನಿಯೋಜಿಸುವಂತೆ ಸೂಚಿಸಿದೆ ಎಂದರು.
ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸಿದಲ್ಲಿ ಸೂಕ್ತ ಕ್ರಮವಹಿಸಲು ಯೋಜನೆ ರೂಪಿಸಲಾಗುತ್ತಿದೆ. ಘಟಕದ ಸುತ್ತಮುತ್ತ ಸಂಚರಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸಲಾಗಿದೆ. ಎರಡು ಲಕ್ಷ ಲೀಟರ್ ಸಂಗ್ರಹದ ವ್ಯವಸ್ಥೆಯಿದ್ದು, ಹೆಚ್ಚುವರಿ ನೀರಿನ ಮೂಲ ರೂಪಿಸಲು ಬೋರ್‌ವೆಲ್ ತೆಗೆಯುವ, ಹೆಚ್ಚುವರಿ ಪಂಪಿಂಗ್ ವ್ಯವಸ್ಥೆ ಮಾಡುವ ಕುರಿತು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಮೇಯರ್ ಪೂರ್ಣಿಮಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯನಾ ಕೋಟ್ಯಾನ್, ಹೇಮಲತಾ ರಘು ಸಾಲ್ಯಾನ್, ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.







