ಮದ್ಯ ಖರೀದಿ ವಯೋಮಿತಿ ಇಳಿಕೆ | ರಾಜ್ಯ ಸರಕಾರದ ನಿಲುವು ಯುವಜನತೆಯ ಭವಿಷ್ಯಕ್ಕೆ ಮಾರಕ: ಯು.ಟಿ.ಖಾದರ್

ಮಂಗಳೂರು, ಜ.18: ರಾಜ್ಯದಲ್ಲಿ ಮದ್ಯ ಖರೀದಿಯ ಕಾನೂನುಬದ್ಧ ವಯೋಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಸುವ ರಾಜ್ಯ ಸರಕಾರದ ಪ್ರಸ್ತಾವಕ್ಕೆ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಈ ನಿಲುವು ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿದೆ. ಸರಕಾರದ ಈ ನಿಲುವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ದೇಶದ ಸಂಸ್ಕೃತಿ, ಮೌಲ್ಯಗಳ ಬಗ್ಗೆ ಮಾತನಾಡುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಯುವಕರನ್ನು ದುಶ್ಚಟಗಳಿಂದ ದೂರ ಮಾಡಲು ಪ್ರಯತ್ನಿಸಬೇಕು. ಯುವಕರಿಗೆ ಮದ್ಯ ಸೇವಿಸಲು ಆಹ್ವಾನ ನೀಡುವಂತಹ ರಾಜ್ಯ ಸರಕಾರದ ಈ ಪ್ರಸ್ತಾವವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸರಕಾರ ಕೇವಲ ಆದಾಯದ ಬಗ್ಗೆ ಯೋಚಿಸುತ್ತಿದೆ. ಆದಾಯ ಹೆಚ್ಚಿಸಲು ಸರಕಾರ ಬೇರೆ ದಾರಿಯನ್ನು ಕಂಡು ಹುಡುಕಲಿ. ಅದನ್ನು ಬಿಟ್ಟು ಯುವ ಜನರನ್ನು ಬಲಿಕೊಡುವ ನಿಟ್ಟಿನಲ್ಲಿ ತಪ್ಪು ಹೆಜ್ಜೆ ಇಡುವುದು ಬೇಡ ಎಂದು ಹೇಳಿದರು.
ಬಿಜೆಪಿ ಸರಕಾರಕ್ಕೆ ಅಡಳಿತವನ್ನು ನಡೆಸಲು ಗೊತ್ತಿಲ್ಲ. ಸರಕಾರ ಮದ್ಯ ಖರೀದಿ ವಯಸ್ಸಿನ ಮಿತಿಯನ್ನು ಇಳಿಸುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಖಾದರ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪಕ್ಷದ ಧುರೀಣರಾದ ಶಾಹುಲ್ ಹಮೀದ್, ಕಳ್ಳಿಗೆ ತರಾನಾಥ ಶೆಟ್ಟಿ, ನವಾಝ್, ಫಾರೂಕ್ ಉಪಸ್ಥಿತರಿದ್ದರು.