ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ KPCC ಸದಸ್ಯತ್ವಕ್ಕೆ ರಾಜೀನಾಮೆ
ಕುಂದಾಪುರ, ಜ.18: ವಿಧಾನ ಪರಿಷತ್ ಮಾಜಿ ಸಭಾಪತಿ, ಕಾಂಗ್ರೆಸ್ ಹಿರಿಯ ಮುಖಂಡ ಪ್ರತಾಪ್ ಚಂದ್ರ ಶೆಟ್ಟಿಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(KPCC) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷ ಸಂಘಟನೆಗಾಗಿ, ಯುವಕರು ಹಾಗೂ ಆಸಕ್ತರಿಗಾಗಿ ಈ ಸ್ಥಾನ ತ್ಯಜಿಸಿ ಅವಕಾಶ ಮಾಡಿಕೊಡುವ ಬಗ್ಗೆ ಪ್ರತಾಪ್ ಚಂದ್ರ ಶೆಟ್ಟಿ ಕಾಂಗ್ರೆಸ್ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಪ್ರತಾಪ್ ಚಂದ್ರ ಶೆಟ್ಟಿಯವರ ಹುದ್ದೆಯ ರಾಜೀನಾಮೆ ವದಂತಿ ಬೆನ್ನಲ್ಲೆ ಎಐಸಿಸಿ ಕಾರ್ಯದರ್ಶಿ, ಕೇರಳ ಶಾಸಕ ರೋಸಿ ಎಂ. ಜಾನ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಶೆಟ್ಟಿಯವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಧ್ರುವನಾರಾಯಣ್, "ಪ್ರತಾಪ್ ಚಂದ್ರ ಶೆಟ್ಟಿಯವರನ್ನು ನಾವು ಭೇಟಿಯಾಗಿದ್ದೇವೆ. ಅವರು ಪಕ್ಷದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಯಾವುದೇ ಅಪಸ್ವರ ಇಲ್ಲ. ಕಾಂಗ್ರೆಸ್ ಕಟ್ಟಾಳು ಆಗಿರುವ ಶೆಟ್ಟಿಯ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಅದೇರೀತಿ ಸಮಾವೇಶದಲ್ಲೂ ಅವರು ಭಾಗವಹಿಸಲಿದ್ದಾರೆ" ಎಂದು ಹೇಳಿದ್ದಾರೆ.