ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ ಪ್ರಕಟ
ಡಾ.ಚಿನ್ನಪ್ಪ ಗೌಡ, ಸಬೀಹಾ ಭೂಮಿಗೌಡ, ಶಿವಾಜಿ ಗಣೇಶನ್ ಸೇರಿದಂತೆ 9 ಮಂದಿಗೆ ಪುರಸ್ಕಾರ

ಮಂಗಳೂರು: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಂಗೀತ, ಮಾಧ್ಯಮ ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ 2023ನೇ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಗೆ 9 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ನಿರ್ದೇಶಕ ಫಾ.ಸುದೀಪ್ ಪೌಲ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದರು.
ಸಂದೇಶ ಸಾಹಿತ್ಯ ಪ್ರಶಸ್ತಿ(ಕನ್ನಡ) -ರಾಘವೇಂದ್ರ ಪಾಟಿಲ್, ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ)- ಆಂಡ್ರೂ ಎಲ್. ಡಿಕುನ್ಹಾ , ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) ಡಾ.ಕೆ.ಚಿನ್ನಪ್ಪಗೌಡ, ಸಂದೇಶ ಮಾಧ್ಯಮ ಪ್ರಶಸ್ತಿ (ಪತ್ರಿಕೋದ್ಯಮ) ಶಿವಾಜಿ ಗಣೇಶನ್ , ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ - ಜೋಯ್ಸಿ ಒಝಾರಿಯೋ, ಸಂದೇಶ ಕಲಾ ಪ್ರಶಸ್ತಿ - ಡಾ.ಎಂ.ಎಸ್.ಮೂರ್ತಿ , ಸಂದೇಶ ಶಿಕ್ಷಣ ಪ್ರಶಸ್ತಿ - ಕೋಟಿ ಗಾನಹಳ್ಳಿ ರಾಮಯ್ಯ, ಸಂದೇಶ ವಿಶೇಷ ಪ್ರಶಸ್ತಿ - ಪ್ರೇರಣಾ ರಿಸೋರ್ಸ್ ಸೆಂಟರ್, ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ - ಸಬೀಹಾ ಭೂಮಿಗೌಡ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಡಾ.ವಲೇರಿಯನ್ ರೋಡ್ರಿಗಸ್ (ಅಧ್ಯಕ್ಷ), ಡಾ.ನಾ.ದಾ.ಶೆಟ್ಟಿ, ಕನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತು ರಫೀಕ್ ಮಾಸ್ಟರ್ ನೇತೃತ್ವದ ಆಯ್ಕೆ ಸಮಿತಿಯು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ವರ್ಷದ ಪ್ರಶಸ್ತಿ ಕಾರ್ಯಕ್ರಮವು ಫೆಬ್ರವರಿ 7ರಂದು ಸಂಜೆ 5.30 ಕ್ಕೆ ನಂತೂರಿನ ಸಂದೇಶ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬಳ್ಳಾರಿ ಬಿಷಪ್ ಅ ವಂ ಹೆನ್ರಿ ಡಿಸೋಜ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮುಖ್ಯ ಅತಿಥಿಯಾಗಿರುತ್ತಾರೆ. ಮಂಗಳೂರು ಬಿಷಪ್ ಅ. ವಂ. ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಬಿಷಪ್ ಅ.ವಂ.ಜೆರಾಲ್ಡ್ ಐಸಾಕ್ ಲೋಬೊ, ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ರೊಯ್ ಕ್ಯಾಸ್ತಲಿನೊ ಹಾಗೂ ವಂ.ಫಾ. ಐವನ್ ಪಿಂಟೊ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ವಲೇರಿಯನ್ ರೋಡ್ರಿಗಸ್ ಭಾಗವಹಿಸಲಿದ್ದಾರೆ ಎಂದು ಸುದೀಪ್ ಪೌಲ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ರೋಯ್ ಕ್ಯಾಸ್ತಲಿನೊ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ವಲೇರಿಯನ್ ರೊಡ್ರಿಗಸ್, ರಫೀಕ್ ಮಾಸ್ಟರ್, ಪ್ರಮುಖರಾದ ಸೈಮನ್ ಕುವೆಲ್ಲೊ ಉಪಸ್ಥಿತರಿದ್ದರು.