ಆಸ್ಟ್ರೇಲಿಯ: ಹಿಂದೂ ದೇಗುಲದ ಮೇಲೆ ಖಾಲಿಸ್ತಾನಿ ಬೆಂಬಲಿಗರ ದಾಳಿ, ಭಾರತ ವಿರೋಧಿ ಭಿತ್ತಿಪತ್ರ

ಮೆಲ್ಬೋರ್ನ್,ಜ.18: ಆಸ್ಟ್ರೇಲಿಯಾ(Australia)ದಲ್ಲಿ ಖಾಲಿಸ್ತಾನಿ ಬೆಂಬಲಿಗರೆನ್ನಲಾ ಗುಂಪೊಂದು ಹಿಂದೂ ದೇವಾಲಯವೊಂದರಲ್ಲಿ ದಾಂಧಲೆ ನಡೆಸಿದೆ ಹಾಗೂ ದೇವಾಲಯದ ಗೋಡೆಗಳಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದಿರುವುದಾಗಿ ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದ ಎರಡನೆ ಘಟನೆ ಇದಾಗಿದೆ.
ಕ್ಯಾರುಮ್ ಡೌನ್ಸ್ ನಲ್ಲಿರುವ ಐತಿಹಾಸಿಕ ಶಿವವಿಷ್ಣು ದೇವಾಲಯದ ಮೇಲೆ ಸೋಮವಾರ ದಾಳಿ ನಡೆದಿರುವುದಾಗಿ ಆಸ್ಟ್ರೇಲಿಯ ಟುಡೇ ಪತ್ರಿಕೆಯ ಸುದ್ದಿಜಾಲತಾಣ ವರದಿ ಮಾಡಿದೆ.
ತಮಿಳು ಹಿಂದೂ ಸಮುದಾಯವು ಆಚರಿಸುವ ಥೈಪೊಂಗಲ್ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿದ್ದಾಗ, ಈ ವಿಧ್ವಂಸಕ ಕೃತ್ಯ ನಡೆದಿರುವುದು ಗಮನಕ್ಕೆ ಬಂದಿತು.
ವಿಕ್ಟೋರಿಯಾದ ಹಿಂದೂ ದೇವಾಲಯದ ಮೇಲೆ ನಡೆದಿರುವ ದಾಳಿಯನ್ನು ವಿವಿಧ ಭಾರತೀಯ ಹಾಗೂ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಜನವರಿ 12ರಂದು ಮೆಲ್ಬೋರ್ನ್ನಲ್ಲಿರುವ ಸ್ವಾಮಿ ನಾರಾಯಣ ದೇವಾಲಯವನ್ನು ಕೂಡಾ ವಿರೂಪಗೊಳಿಸಲಾಗಿತ್ತು ಹಾಗೂ ಭಾರತ ವಿರೋಧಿ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು.